ತಿರುವನಂತಪುರಂ: ಕೂದಲು ಉದುರುವ ಸಮಸ್ಯೆಯಿರುವ ಹಿನ್ನಲೆಯಲ್ಲಿ ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕೋಝಿಕ್ಕೋಡ್ ನಲ್ಲಿ ನಡೆದಿದೆ.
ಕೋಝೀಕ್ಕೋಡ್ ಜಿಲ್ಲೆಯ ಅಥೋಲಿ ಗ್ರಾಮ ನಿವಾಸಿ ಪ್ರಶಾಂತ್ (29) ಆತ್ಮಹತ್ಯೆಗೆ ಶರಣಾದ ಯುವಕ. ಪ್ರಶಾಂತ್ ವೆಹಿಕಲ್ ಮೆಕ್ಯಾನಿಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಆದರೆ ಆತನಿಗೆ ಹುಬ್ಬು ಸೇರಿದಂತೆ ತಲೆಕೂದಲು ಉದುರುತ್ತಿತ್ತು. ಅದಕ್ಕಾಗಿ 2014ರಿಂದ ಕೂದಲು ಉದುರುವಿಕೆಗೆ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಸೂಚಿಸಿದ ಮಾತ್ರೆಗಳನ್ನು ಸೇವಿಸುತ್ತಿದ್ದ. ಆದರೂ ತಲೆ ಕೂದಲು ಉದುರುವುದು ನಿಂತಿರಲಿಲ್ಲ. ಅಷ್ಟಲ್ಲದೆ ಕೂದಲು ಇಲ್ಲವೆಂದು ಅನೇಕರು ಆತನನ್ನು ಮದುವೆಯಾಗಲು ತಿರಸ್ಕರಿಸಿದ್ದರು.
ಈ ಹಿನ್ನೆಲೆಯಲ್ಲಿ ಆತ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಪ್ರಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿದ್ದು, ಕೂದಲು ಉದುರುವ ಸಮಸ್ಯೆಯಿಂದ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಕೂದಲು ಉದುರುವ ಸಮಸ್ಯೆ ಹಾಗೂ ಚಿಕಿತ್ಸೆ ನೀಡಿದ ವೈದ್ಯರೇ ಕಾರಣ ಎಂದು ಬರೆದಿದ್ದಾನೆ.
ಘಟನೆಗೆ ಸಂಬಂಧಿಸಿ ಪ್ರಶಾಂತ್ ಕುಟುಂಬಸ್ಥರು ವೈದ್ಯರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.