ಮಂಗಳೂರು: ಸಿಐಎಸ್ಎಫ್ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಕರ್ತವ್ಯದಲ್ಲಿದ್ದಾಗಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನ

ಮಂಗಳೂರು: ನಗರದ ಪಣಂಬೂರಿನ ಎನ್ಎಂಪಿಎ ಮುಖ್ಯದ್ವಾರದಲ್ಲಿ ಕರ್ತವ್ಯದಲ್ಲಿದ್ದ ಸಿಐಎಸ್ಎಫ್ ಮಹಿಳಾ ಪೊಲೀಸ್  ಸಬ್ ಇನ್ ಸ್ಪೆಕ್ಟರ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜಸ್ತಾನ ರಾಜ್ಯದ ಭರತ್ ಪುರ ಜಿಲ್ಲೆ ಮೂಲದ ಜ್ಯೋತಿ ಬಾಯಿ ಆತ್ಮಹತ್ಯೆಗೆ ಯತ್ನಿಸಿದ ಸಿಐಎಸ್ಎಫ್ ಮಹಿಳಾ ಪಿಎಸ್ಐ


ಜ್ಯೋತಿ ಬಾಯಿಯವರು ಬುಧವಾರ ಮುಂಜಾನೆ 6 - 6.15 ರ ವೇಳೆ ಎನ್ಎಂಪಿಎ ಮುಖ್ಯ ದ್ವಾರದ ಬಳಿ ಕರ್ತವ್ಯದಲ್ಲಿದ್ದಾಗಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ. ಜ್ಯೋತಿ ಬಾಯಿಯವರ ಪತಿ ಓಂಬೀರ್ ಸಿಂಗ್ ಪಾರ್ಮರ್, ಮಂಗಳೂರಿನ ಎಂಆರ್ ಪಿಎಲ್ ನಲ್ಲಿ ಅಸಿಸ್ಟೆಂಟ್ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ ಅದರಲ್ಲಿ ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ‌.

ಆತ್ಮಹತ್ಯೆಗೆ ಯತ್ನಿಸುವ ಮೊದಲು ಜ್ಯೋತಿ ಬಾಯಿಯವರು ತಮ್ಮ ತಾಯಿಗೆ ಹಿಂದಿ ಭಾಷೆಯಲ್ಲಿ ಡೆತ್ ನೋಟ್ ಕೂಡಾ ಬರೆದಿದ್ದಾರೆ. 'ಕ್ಷಮಿಸಿ ಅಮ್ಮ, ಈ ಜಗತ್ತಿನಲ್ಲಿ ನನಗೆ ಬದುಕಲು ಸಾಧ್ಯವಿಲ್ಲ. ಅದಕ್ಕಾಗಿ ನನ್ನ ಇಚ್ಛೆಯಿಂದಲೇ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಬರೆದಿದ್ದಾರೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದು ಇನ್ನಷ್ಟೇ ತಿಳಿಯಬೇಕಿದೆ.