ಮಂಗಳೂರು: ಓವರ್ ಟೇಕ್ ಭರದಲ್ಲಿ ಬಸ್ ಮೊಟ್ಟೆ ಸಾಗಾಟದ ವಾಹನಕ್ಕೆ ಢಿಕ್ಕಿ: ಮೊಟ್ಟೆಗಳೆಲ್ಲಾ ರಸ್ತೆಯಲ್ಲಿ ಚಲ್ಲಾಪಿಲ್ಲಿ

ಮಂಗಳೂರು: ಖಾಸಗಿ ಬಸ್ಸೊಂದು ಓವರ್ ಟೇಕ್ ಮಾಡುವ ಭರದಲ್ಲಿ ನಿಲ್ಲಿಸಿದ್ದ ಮೊಟ್ಟೆ ಸಾಗಾಟದ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೊಟ್ಟೆಗಳೆಲ್ಲಾ  ಚೆಲ್ಲಾಪಿಲ್ಲಿಯಾಗಿ ರಸ್ತೆ ಪಾಲಾದ ಘಟನೆ ನಗರದ ವೆಲೆನ್ಸಿಯಾದಲ್ಲಿ ನಡೆದಿದೆ. 

ಬಸ್ ಢಿಕ್ಕಿ ಹೊಡೆದಿರುವ ರಭಸಕ್ಕೆ ಮೊಟ್ಟೆ ಸಾಗಾಟದ ವಾಹನವು ಸುಮಾರು 15 ಅಡಿಗಳಷ್ಟು ದೂರ ತಳ್ಳಲ್ಪಟ್ಟಿದೆ. ಪರಿಣಾಮ ಮೊಟ್ಟೆಗಳೆಲ್ಲಾ ಒಡೆದು ರಸ್ತೆಗೆ ಪಾಲಾಗಿದೆ. ಮಂಗಳಾದೇವಿಯಿಂದ ಬರುತ್ತಿದ್ದ ಎರಡು ಖಾಸಗಿ ಬಸ್ ಗಳ ಮಧ್ಯೆ ರೇಸಿಂಗ್ ನಡೆದಿದೆ. ವೆಲೆನ್ಸಿಯಾದ ಸರ್ಕಲ್ ಬಳಿ ತಲುಪುತ್ತಿದ್ದಂತೆ ಒಂದು ಬಸ್ ಓವರ್ ಟೇಕ್ ಮಾಡಲು ಮುಂದಾಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯಲ್ಲಿ ನಿಲ್ಲಿಸಿ ಅಂಗಡಿಗೆ ಮೊಟ್ಟೆ ಪೂರೈಕೆ ಮಾಡುತ್ತಿದ್ದ ವಾಹನಕ್ಕೆ ಢಿಕ್ಕಿ ಹೊಡೆದಿದೆ.

ಪರಿಣಾಮ ಆ ವಾಹನದಲ್ಲಿದ್ದ ಮೊಟ್ಟೆಗಳಲ್ಲೇ ಒಡೆದು ರಸ್ತೆಯಲ್ಲಿ ಮೊಟ್ಟೆಯ ಲೋಳೆ ನೀರಿನಂತೆ ಹರಿದಿದೆ. ಬಸ್ ಢಿಕ್ಕಿ ಹೊಡೆದ ರಭಸಕ್ಕೆ ಮೊಟ್ಟೆ ಸಾಗಾಟದ ವಾಹನ ಎದುರಿದ್ದ ಗೂಡ್ಸ್ ಟೆಂಪೊ ಹಾಗೂ ಬೈಕ್ ಗೂ ಢಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಆಗಮಿಸಿದ್ದು , ಅಪಘಾತಕ್ಕೆ ಕಾರಣವಾದ ಬಸ್ಸನ್ನು ವಶಪಡಿಸಿಕೊಂಡಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu