ಬೆಳ್ತಂಗಡಿ: ಸಾರ್ವಜನಿಕ ಸಭೆಯಲ್ಲಿ ಧಾರ್ಮಿಕ ಭಾವನೆ ಕೆರಳಿಸುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐ (SDPI) ರಾಷ್ಟ್ರೀಯ ನಾಯಕ ಮಹಮ್ಮದ್ ರಿಯಾಜ್ ಫರಂಗಿಪೇಟೆಗೆ ಬೆಳ್ತಂಗಡಿಯ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಬೆಳ್ತಂಗಡಿಯ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ಸಿ (Principal CJ &
JMFC) ನ್ಯಾಯಾಲಯದ ನ್ಯಾಯಾಧೀಶರಾದ ರಾಮಲಿಂಗಪ್ಪ
ಅವರು ಪ್ರಕರಣದ ವಿಚಾರಣೆ ನಡೆಸಿ, ಆರೋಪಿ ವಿರುದ್ಧದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಐಪಿಸಿ
ಕಲಂ 153(A)
ಅಡಿಯಲ್ಲಿ 6 ತಿಂಗಳ ಸಾದಾ
ಸಜಾವಾಸ ಹಾಗೂ 10,000 ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ.
ಘಟನೆಯ ವಿವರ:
ಕಳೆದ
2015 ರ ಜುಲೈ 23 ರಂದು ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗ 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' (PFI) ವತಿಯಿಂದ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ್ದ
ಮಹಮ್ಮದ್ ರಿಯಾಜ್ ಫರಂಗಿಪೇಟೆ, ಕೋಮು ಭಾವನೆ ಕೆರಳಿಸುವ ಹಾಗೂ ಧಾರ್ಮಿಕ ಚೌಕಟ್ಟಿಗೆ ಧಕ್ಕೆ ತರುವಂತಹ ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎನ್ನಲಾಗಿತ್ತು. ಈ ಕುರಿತು ಬೆಳ್ತಂಗಡಿ
ಪೊಲೀಸ್ ಠಾಣೆಯಲ್ಲಿ ಕ್ರೈಮ್ ನಂ. 315/2015 ರಂತೆ ಐಪಿಸಿ ಕಲಂ 153(A) ಮತ್ತು 295(A) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ದೋಷಾರೋಪಣಾ ಪಟ್ಟಿ ಹಾಗೂ ತೀರ್ಪು:
ಪ್ರಕರಣದ
ತನಿಖೆ ನಡೆಸಿದ್ದ ಅಂದಿನ ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕ (PSI) ರವಿ
ಬಿ.ಎಸ್. ಅವರು ಅಗತ್ಯ ಸಾಕ್ಷ್ಯಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಕೆ ಮಾಡಿದ್ದರು. ಸರ್ಕಾರಿ ಅಭಿಯೋಜಕರಾದ (Public
Prosecutor) ಶ್ರೀಮತಿ ಆಶೀತ ಅವರು ಸರ್ಕಾರದ ಪರವಾಗಿ ಸಮರ್ಥ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ಮಾನ್ಯ ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
