ಭೋಪಾಲ್: ಮಧ್ಯಪ್ರದೇಶದ ಸರ್ಕಾರಿ ಅಧಿಕಾರಿಯ ಮನೆ ಮೇಲೆ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು)ದ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಆತನ ಅಪಾರ ಪ್ರಮಾಣದ ಆಸ್ತಿ - ಪಾಸ್ತಿ, ಐಷಾರಾಮಿ ವ್ಯವಸ್ಥೆಯನ್ನು ನೋಡಿ ಇಒಡಬ್ಲ್ಯು ಅಧಿಕಾರಿಗಳೇ ಬೆಸ್ತುಬಿದ್ದಿದ್ದಾರೆ. ಏಕೆಂದರೆ, ಈ ಸರಕಾರಿ ಅಧಿಕಾರಿಯ ಯಾವ ಫೈವ್ ಸ್ಟಾರ್ ಹೋಟೆಲ್‌ಗೂ ಕಡಿಮೆ ಇಲ್ಲ ಅನ್ನುವಂತಿದೆಯಂತೆ.
ಮಧ್ಯಪ್ರದೇಶದ ಪಟಿಯಾಲದಲ್ಲಿ ಈ ಐಷಾರಾಮಿ ಮನೆಯಿದ್ದು, ಈಜುಕೊಳ, ಬೃಹತ್ ಸ್ನಾನದ ತೊಟ್ಟಿ, ಮಿನಿ ಬಾರ್ ಹಾಗೂ ಹೋಮ್ ಥಿಯೇಟರ್ ಸೇರಿದಂತೆ ಲಕ್ಷುರಿ ಹೋಟೆಲ್‌ಗಳಲ್ಲಿರುವ ಎಲ್ಲಾ ವ್ಯವಸ್ಥೆಗಳನ್ನು ಈ ಸರಕಾರಿ ಅಧಿಕಾರಿ ತಮ್ಮ ಮನೆಯಲ್ಲೇ ಮಾಡಿಸಿಕೊಂಡಿದ್ದಾರೆ.
ಇದು ಮಧ್ಯಪ್ರದೇಶದ ಆರ್‌ಟಿಒ ಅಧಿಕಾರಿ ಸಂತೋಷ್ ಪೌಲ್ ಎಂಬುವರಿಗೆ ಸೇರಿದ್ದಾಗಿದೆ. ಅಕ್ರಮ ಆಸ್ತಿ ಸಂಪದಾನೆ ಆರೋಪದಲ್ಲಿ ಜಬಲ್ಪುರದಲ್ಲಿರುವ ಈತನ ಮನೆಯ ಮೇಲೆ ಇಒಡಬ್ಲ್ಯು ದಾಳಿ ನಡೆಸಿದ್ದಾರೆ. ಈ ವೇಳೆ ಸರ್ಕಾರಿ ಅಧಿಕಾರಿಯ ಐಷಾರಾಮಿ ವ್ಯವಸ್ಥೆ ಬಯಲಾಗಿದೆ. ಈತನ ಮನೆಯಲ್ಲಿರುವ ಐಷಾರಾಮಿ ಸೌಲಭ್ಯಗಳಿಗೆ ಸಾಕ್ಷಿಯಾಗಿ ದಾಳಿಯ ವೇಳೆ ಸೆರೆಹಿಡಿದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಸರಕಾರಿ ಅಧಿಕಾರಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 5 ಮನೆಗಳಿವೆಯಂತೆ.
ಇಒಡಬ್ಲ್ಯು ಅಧಿಕಾರಿಗಳ ದಾಳಿಯ ವೇಳೆ ಈತನ ಮನೆಯಲ್ಲಿ 15 ಲಕ್ಷ ರೂ. ನಗದು, ದುಬಾರಿ ಚಿನ್ನಾಭರಣಗಳು, ಲಕ್ಷುರಿ ಕಾರುಗಳು, ಮನೆಗಳು ಹಾಗೂ ಫಾರ್ಮ್ ಹೌಸ್‌ಗಳು ಪತ್ತೆಯಾಗಿವೆ. ಸಂತೋಷ್ ಪೌಲ್ ಪತ್ನಿ ರೇಖಾ ಕೂಡ ಸರ್ಕಾರಿ ನೌಕರೆಯಾಗಿದ್ದು, ಪತಿಯ ಕಚೇರಿಯಲ್ಲೇ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾಳೆ. ಪ್ರಾಥಮಿಕ ತನಿಖೆಯ ಪ್ರಕಾರ, ದಂಪತಿಯ ಆದಾಯದ ಮೂಲಗಳಿಗೆ ಹೋಲಿಸಿದರೆ ಶೇ.650ರಷ್ಟು ಅಧಿಕ ಪಟ್ಟು ಆಸ್ತಿಯನ್ನು ಹೊಂದಿದ್ದಾರೆ. ಈ ಬಗ್ಗೆ ಸದ್ಯ ತನಿಖೆ ಮುಂದುವರಿದಿದೆ.