ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ PFI ಲಿಂಕ್ ದಾಖಲೆಗಳಿಲ್ಲದೆ ಹೇಳೋಲ್ಲ: ಎಡಿಜಿಪಿ

ಮಂಗಳೂರು: ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಪಿಎಫ್ಐ ಶಂಕಿತ ಲಿಂಕ್ ಇರುವ ಬಗ್ಗೆ ನಾವು ದಾಖಲೆಗಳಿಲ್ಲದೆ ಏನನ್ನೂ ನಾವು ಹೇಳೋಲ್ಲ. ಪ್ರಕರಣದ ತನಿಖೆಯ ಬಳಿಕ ಯಾರಿಗೆಲ್ಲಾ ಪಿಎಫ್ಐ ಲಿಂಕ್ ಇದೆ ಎಂಬುದನ್ನು ಬಹಿರಂಗಪಡಿಸುತ್ತೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು. 




ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಆರೋಪಿಗಳ ಕೇರಳ ಲಿಂಕ್ ಬಗ್ಗೆಯೂ ಈಗಲೇ ಏನನ್ನೂ ಹೇಳಲಾಗುವುದಿಲ್ಲ. ಈಗ ಸೆರೆ ಸಿಕ್ಕ ಆರೋಪಿಗಳೆಲ್ಲ ಸ್ಥಳೀಯರೇ ಆಗಿದ್ದಾರೆ. ಪ್ರಕರಣದಲ್ಲಿರುವ ಆರೋಪಿಗಳಲ್ಲಿ ಹಲವರು ಈಗಾಗಲೇ ತಲೆಮರೆಸಿಕೊಂಡಿದ್ದಾರೆ. ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗುತ್ತದೆ‌ ಎಂದು ಹೇಳಿದರು.




ಪ್ರವೀಣ್ ನೆಟ್ಟಾರು ಹಂತಕರಲ್ಲಿ ಏಳು ಮಂದಿಯನ್ನು ಈಗಾಗಲೇ ದಸ್ತಗಿರಿ ಮಾಡಲಾಗಿದೆ. ಇನ್ನೂ ಮೂವರು ಪ್ರಮುಖ ಹಂತಕರ ಬಂಧನವಾಗಬೇಗಿದೆ. ಅವರ ಬಂಧನಕ್ಕಾಗಿ ಇಂದು ಬೆಳ್ಳಾರೆಯಲ್ಲಿ ದ.ಕ.ಜಿಲ್ಲೆಯ ಹಾಗೂ ಇನ್ನಿತರ ಜಿಲ್ಲೆಯ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದೇವೆ ಎಂದು ಹೇಳಿದರು.






ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಯಾರು ಸಹಕರಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಎನ್ಐಎ ತಂಡ ನಮ್ಮೊಂದಿಗೆ ಇದೆ. ಎನ್ಐಎ ಹಾಗೂ ಕರ್ನಾಟಕ ಪೊಲೀಸ್ ಜಂಟಿಯಾಗಿ ಪ್ರಕರಣದ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಪ್ರಮುಖ ಮೂವರು ಆರೋಪಿಗಳ ಗುರುತು ಪತ್ತೆಯಾಗಿದೆ. ಅವರ ಮನೆಯ ವಿಳಾಸ, ತಂದೆ, ತಾಯಿ, ಪತ್ನಿಯ ಬಗ್ಗೆಯೂ ತಿಳಿದಿದೆ‌. ಆದರೆ ಆರೋಪಿಗಳನ್ನು ಬಚ್ಚಿಡುವ ಕಾರ್ಯ ಆಗುತ್ತಿದೆ. ಬೇರೆ ಬೇರೆ ಕಡೆಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ‌ ಎಂದರು.

ಫಾಝಿಲ್ ಹತ್ಯೆಯ ಪ್ರಕರಣದಲ್ಲಿ ಆರೋಪಿಗಳಿಗೆ ಆಶ್ರಯ  ನೀಡಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ನಾಳೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದೇನೆ. ಈ ಪ್ರಕರಣದಲ್ಲೂ ಒಬ್ಬಿಬ್ಬರೂ ಇನ್ನ ಬಂಧನವಾಗಬೇಕಿದೆ. ಸಮರ್ಪಕ ರೀತಿಯಲ್ಲಿ ತನಿಖೆ ನಡೆಯುತ್ತಿದೆ ಎಂದು ಅಲೋಕ್ ಕುಮಾರ್ ಹೇಳಿದರು.