ಮಧ್ಯಪ್ರದೇಶ: ಅಪ್ರಾಪ್ತೆ, 65 ವರ್ಷದ ವೃದ್ಧೆಯ ಮೇಲೆ‌ ಸೋದರರಿಂದ ಅತ್ಯಾಚಾರ; ಬಾಲಕಿ ಮೃತ್ಯು

ಜಬಲ್ಪುರ: 16ರ ಸೋದರ ಸಂಬಂಧಿ ಬಾಲಕಿ ಹಾಗೂ ಆಕೆಯ 65ವರ್ಷದ ಅಜ್ಜಿಯ ಮೇಲೆ ಸಹೋದರರಿಬ್ಬರು ಅತ್ಯಾಚಾರ ಎಸಗಿರುವ ಪ್ರಕರಣ ಬಾಲಕಿ ಮೃತಪಟ್ಟ ಬಳಿಕ ತಡವಾಗಿ ಮಧ್ಯಪ್ರದೇಶದ ಜಬಲ್ಪುರದಲ್ಲಿ  ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿತೆ ಸಹೋದರರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 

ಆರೋಪಿಗಳಿಬ್ಬರು 21, 22 ವಯಸ್ಸಿನವರಾಗಿದ್ದಾರೆ. ಮಧ್ಯಪ್ರದೇಶದ ಜಬಲ್ಪುರದ ರಂಜಿ ಎಂಬಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಯುವಕರು ಆಕೆಯನ್ನು ಅಮಾನುಷವಾಗಿ ಥಳಿಸಿದ್ದಾರೆ. ಪರಿಣಾಮ ಬಾಲಕಿ ಆಂತರಿಕ ಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ಹೆಚ್ಚುವರಿ ಎಸ್ಪಿ ದಿಲೀಪ್ ಶಿಂಧೆ ಹೇಳಿದ್ದಾರೆ. 

ಅಪ್ರಾಪ್ತ ವಯಸ್ಸಿನ ಈ ಬಾಲಕಿ ರಕ್ಷಾಬಂಧನದ ನಿಮಿತ್ತ ಮುಂಬೈನಿಂದ ಆಗಮಿಸಿದ್ದಳು. ಬಳಿಕ ಆಕೆ ಅತ್ಯಾಚಾರಕ್ಕೊಳಗಾಗಿ ಆಂತರಿಕ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಆಕೆಯ ತಂದೆಗೆ ತಮ್ಮ ಅಳಿಯನ ಚಟುವಟಿಕೆಗಳ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆದ್ದರಿಂದ ಅವರು ರಂಜಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಎಂದು ಹೆಚ್ಚುವರಿ ಎಸ್ಪಿ ವಿವರಿಸಿದ್ದಾರೆ.

ಬಾಲಕಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದುದನ್ನು ನೋಡಿ ತಡೆಯಲು ಯತ್ನಿಸಿರುವ 65 ವರ್ಷದ ವೃದ್ಧೆಯ ಮೇಲೂ ಅತ್ಯಾಚಾರ ಎಸಗಲಾಗಿದೆ. ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿ ಕಾಯಲಾಗುತ್ತಿದ್ದು, ಆರೋಪಿ ಯುವಕರ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ .