ಮಂಗಳೂರು: ಪಬ್ ನಲ್ಲಿ ಕುಡಿದು ಮೋಜು ಮಸ್ತಿಯಲ್ಲಿ ತೊಡಗಿದ್ದರೆನ್ನಲಾದ ಕಾಲೇಜು ವಿದ್ಯಾರ್ಥಿ - ವಿದ್ಯಾರ್ಥಿನಿಯರ ಗುಂಪನ್ನು ತಡೆದ ಬಜರಂಗದಳದ ಕಾರ್ಯಕರ್ತರು ಪಾರ್ಟಿಯಿಂದ ಹೊರ ಕಳುಹಿಸಿರುವ ಘಟನೆ ರಾತ್ರಿ ನಡೆದಿದೆ.
ಮಂಗಳೂರಿನ ಬಲ್ಮಠದಲ್ಲಿರುವ ರಿ-ಸೈಕಲ್ ದಿ ಲಾಂಜ್ ಪಬ್ ನಲ್ಲಿ ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿಗಳು ಪಾರ್ಟಿ ನಡೆಸುತ್ತಿದ್ದರು ಎನ್ನಲಾಗಿದೆ. ಕಾಲೇಜು ಫೇರ್ ವೆಲ್ ನೆಪದಲ್ಲಿ ಪಬ್ ನಲ್ಲಿ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿ - ವಿದ್ಯಾರ್ಥಿನಿಯರು ಕುಡಿತ, ಮೋಜು - ಮಸ್ತಿಯಲ್ಲಿ ತೊಡಗಿದ್ದರೆಂದು ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
ಬಜರಂಗದಳದ ಕಾರ್ಯಕರ್ತರು ಪಬ್ ನೊಳಗೆ ಹೋಗಿ ಪಾರ್ಟಿ ನಿಲ್ಲಿಸುವಂತೆ ಬೈದು ವಿದ್ಯಾರ್ಥಿಗಳನ್ನು ಹೊರ ಕಳುಹಿಸಿದ್ದಾರೆ. ಸದ್ಯ ಪಾರ್ಟಿಯನ್ನು ವಿದ್ಯಾರ್ಥಿಗಳು ಅರ್ಧದಲ್ಲೇ ನಿಲ್ಲಿಸಿ ಅಲ್ಲಿಂದ ಹೊರಟಿದ್ದಾರೆ. ತುಂಡುಡುಗೆಯನ್ನು ತೊಟ್ಟು ಕುಡಿದು ವಿದ್ಯಾರ್ಥಿಗಳು ಮೋಜು ಮಸ್ತಿಯಲ್ಲಿ ತೊಡಗಿದ್ದರು ಎಂದು ಆರೋಪಿಸಲಾಗಿದೆ. ತಕ್ಷಣ ಮಧ್ಯ ಪ್ರವೇಶಿಸಿದ ಪೊಲೀಸರು ಬಜರಂಗದಳದ ಕಾರ್ಯಕರ್ತರನ್ನು ಚದುರಿಸಿದ್ದಾರೆ.