ಪುಣೆ: ಯುವಕನ ಕಣ್ಣೀರಿಗೆ ಕರಗಿ ಹಣ ಕಳೆದುಕೊಂಡರು ನಾಲ್ವರು ಬಿಜೆಪಿ ಶಾಸಕಿಯರು
Wednesday, July 20, 2022
ಪುಣೆ : ಇತ್ತೀಚೆಗೆ ಸೈಬರ್ ವಂಚನೆ ಪ್ರಕರಣಗಳು ಅಧಿಕವಾಗುತ್ತಲೇ ಇದೆ. ಈ ಕುರಿತು ಮಾಧ್ಯಮಗಳಲ್ಲಿ ಎಷ್ಟೇ ಮಾಹಿತಿ ನೀಡಿದರೂ, ಮೋಸಕ್ಕೊಳಗಾಗುವವರು ಇದ್ದೇ ಇರುತ್ತಾರೆ. ಇದೀಗ ನಾಲ್ವರು ಶಾಸಕಿಯರು ಯುವಕನೋರ್ವನ ವಂಚನೆಗೆ ಬಲಿಯಾಗಿರೋದು ಬೆಳಕಿಗೆ ಬಂದಿದೆ.
ಮಾಧುರಿ ಮಿಸಾಲ್ , ಶ್ವೇತಾ ಮಹಾಲೆ , ಮೇಘನಾ ಬೋರ್ಡಿಕರ್ , ದೇವಯಾನಿ ಫರಾಂಡೆ ವಂಚನೆಗೊಳಗಾದ ಶಾಸಕಿಯರು. ಮುಖೇಶ್ ರಾಥೋಡ್ ಎಂಬಾತನೇ ಇವರನ್ನೆಲ್ಲಾ ಮೋಸ ಮಾಡಿದ ಯುವಕ.
ಈ ನಾಲ್ವರು ಕೂಡ ಬಿಜೆಪಿ ಶಾಸಕಿಯರಾಗಿದ್ದು, ಇವರು ಯುವಕನೊಬ್ಬನಿಗೆ ಕರುಣೆ ತೋರಿ ಮೋಸ ಹೋಗಿದ್ದಾರೆ. ತಾಯಿಗೆ ಅನಾರೋಗ್ಯವೆಂದು ನೆಪ ಹೇಳಿ ಈತ ಯುವಕ ಶಾಸಕಿಯರಿಗೆ ಟೋಪಿ ಹಾಕಿದ್ದಾನೆ. ಈತ ಎಲ್ಲಾ ಶಾಸಕಿಯರಿಗೂ ಕರೆ ಮಾಡಿ ತನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಸಹಾಯ ಮಾಡಿ ಎಂದು ಗೋಗರೆದಿದ್ದಾನೆ.
ಈತನ ಕಣ್ಣೀರಿಗೆ ಕರಗಿದ ಶಾಸಕಿಯರು ಗೂಗಲ್ ಪೇ ಮೂಲಕ ಹಣ ನೀಡಿದ್ದಾರೆ. ಆ ಬಳಿಕ ಅವರಿಗೆ ತಾವು ಮೋಸ ಹೋಗಿರುವುದು ತಿಳಿದುಬಂದಿದೆ. ಸದ್ಯ ಶಾಸಕಿಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ . ಯುವಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.