ಮಂಗಳೂರು: ನಿಲ್ಲಿಸಿರುವ ಬಸ್ ನಿಂದ ಕಲೆಕ್ಷನ್ ಹಣವನ್ನೇ ಎಗರಿಸಿದ ಖದೀಮ ಕಳ್ಳ: ಕೃತ್ಯದ ವೀಡಿಯೋ ವೈರಲ್

ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ನಲ್ಲಿ ನಿಲ್ಲಿಸಲಾಗಿದ್ದ ಖಾಸಗಿ ಬಸ್ ನಿಂದ ನಿರ್ವಾಹಕನ ಕಲೆಕ್ಷನ್ ಹಣದ ಬ್ಯಾಗ್ ಅನ್ನೇ ಖದೀಮ ಕಳ್ಳನೋರ್ವನು ಎಗರಿಸಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಉಪ್ಪಿನಂಗಡಿ - ಸ್ಟೇಟ್‌ಬ್ಯಾಂಕ್‌ ನಡುವೆ ಸಂಚರಿಸುವ ಈ ಖಾಸಗಿ ಬಸ್ ನ ಚಾಲಕ ಮತ್ತು ನಿರ್ವಾಹಕ ಊಟಕ್ಕೆಂದು ತೆರಳಿದ್ದರು. ಈ ಸಂದರ್ಭ ಬಸ್‌ನೊಳಗೆ ಪ್ರವೇಶಿಸಿರುವ ಖದೀಮ ಕಳ್ಳ ತನ್ನ ಕೈಚಳಕವನ್ನು ತೋರಿಸಿದ್ದಾನೆ. ಬಸ್‌ನಲ್ಲಿ ಬೇರೆ ಯಾರೂ ಇಲ್ಲದಿರುವುದನ್ನು ಗಮನಿಸಿ ಬಸ್ ಪ್ರವೇಶಿಸಿ ಆತ ಬ್ಯಾಗ್ ನಲ್ಲಿದ್ದ 4,500 ರೂ. ಕಲೆಕ್ಷನ್ ಹಣವನ್ನು ಎಗರಿಸಿದ್ದಾನೆ ಎನ್ನಲಾಗಿದೆ.

ಆತ ಕೃತ್ಯ ಎಸಗುವ ಸಂಪೂರ್ಣ ದೃಶ್ಯವು ಬಸ್‌ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಬಸ್‌ ನಿರ್ವಾಹಕ ಬ್ಯಾಗ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಹಣವನ್ನು ಕಳ್ಳ ದೋಚಿದ್ದಾನೆ. ಈ ಬಗ್ಗೆ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.