ಕೆವೈಸಿ ಅಪ್‌ಡೇಟ್: ಶಿಕ್ಷಕಿ ಖಾತೆಗೆ ಕನ್ನ, ಎಂಟು ಲಕ್ಷ ರೂ. ಎಗರಿಸಿದ ಹ್ಯಾಕರ್‌ಗಳು
ಕೆವೈಸಿ ಅಪ್‌ಡೇಟ್: ಶಿಕ್ಷಕಿ ಖಾತೆಗೆ ಕನ್ನ, ಎಂಟು ಲಕ್ಷ ರೂ. ಎಗರಿಸಿದ ಹ್ಯಾಕರ್‌ಗಳು
KYC ಅಪ್‌ಡೇಟ್ ಮಾಡಲು ಬ್ಯಾಂಕ್‌ನ ಸೇವಾ ಕೇಂದ್ರಕ್ಕೆ ಕರೆ ಮಾಡಲು ತಿಳಿಸಿ ಇಂಟರ್ ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಮೂಲಕ ಸಾಲ ಮಂಜೂರಾತಿ ಪಡೆದು ಸಾಲದ ಮೊತ್ತವನ್ನು ಲಪಟಾಯಿಸಿದ ವಂಚನ ಜಾಲವೊಂದು ಕರಾವಳಿ ಜಿಲ್ಲೆಯಲ್ಲಿ ನಡೆದಿದೆ. ಈ ಜಾಕ್ಕೆ ಸಿಲುಕಿದ ಶಿಕ್ಷಕಿಯೊಬ್ಬರು 7.47 ಲಕ್ಷ ರೂಪಾಯಿ ಕಳೆದುಕೊಂಡ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಯಾಡಿ ಗ್ರಾಮದ ಕೊಪ್ಪ ಮಾದೇರಿ ನಿವಾಸಿ ಪ್ರಸಕ್ತ ಸರಕಾರಿ ಪ್ರೌಢಶಾಲಾ ಶಿಕ್ಷಕಿ ವಂಚನೆಗೀಡಾದವರು. ಜೂನ್ 11ರಂದು ಅವರ ಮಗನ ಮೊಬೈಲ್‌ಗೆ ATM ಕಾರ್ಡ್ ಬ್ಲಾಕ್ ಆಗಿರುವ ಬಗ್ಗೆ ಮೆಸೇಜ್ ಬಂದಿತ್ತು.
ಜೂನ್ 23ರಂದು 7029216854 ಸಂಖ್ಯೆಯ ಮೊಬೈಲ್ ನಂಬರ್‌ನಿಂದ ಮೆಸೇಜ್ ಬಂದಿದ್ದು, ಆ ಮೆಸೇಜ್‌ನಲ್ಲಿ ನಮ್ಮ ಬ್ಯಾಂಕ್‌ನ ಸೇವಾ ಕೇಂದ್ರ ಸಂಖ್ಯೆ 8240871104 ಇದಕ್ಕೆ ಕರೆ ಮಾಡಿ KYC ಅಪ್‌ಡೇಟ್ ಮಾಡುವಂತೆ ಸೂಚಿಸಲಾಗಿತ್ತು.
ಇದನ್ನು ಬಳಸಿ ವ್ಯವಸ್ಥಿತವಾಗಿ ಬ್ಯಾಂಕಿನಿಂದ ಖಾತೆಯ ಮೊಬೈಲ್ ನಂಬರ್ ಬದಲಾಯಿಸಲಾಗಿತ್ತು. ಈ ಬಗ್ಗೆ ಬ್ಯಾಂಕ್ ವಿಚಾರಿಸಿದಾಗಲೇ ಶಿಕ್ಷಕಿಗೆ ತಾವು ಮೋಸ ಹೋಗಿದ್ದೇನೆ ಎಂದು ಗೊತ್ತಾಯಿತು.
ತಕ್ಷಣ, ಬ್ಯಾಂಕ್‌ಗೆ ಹೋಗಿ ಪರಿಶೀಲಿಸಿದಾಗ ಖಾತೆಗೆ ಜೂ. 23ರಂದು 8 ಲಕ್ಷ ರೂ. ಜಮೆಯಾಗಿದ್ದು, ಆ ಮೊತ್ತದಲ್ಲಿ ಸ್ವಲ್ಪ ಸ್ವಲ್ಪವಾಗಿ ಒಟ್ಟು 7.47 ಲಕ್ಷ ರೂ. ಮೊತ್ತವನ್ನು ವಿತ್‌ಡ್ರಾ ಮಾಡಲಾಗಿತ್ತು.
ಈ ವಿಚಾರದ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರಲ್ಲಿ ವಿಚಾರಿಸಿದಾಗ ದೂರುದಾರರ ಖಾತೆಯಿಂದ 8 ಲಕ್ಷ ರೂ. ಸಾಲ ಮಂಜೂರು ಆಗಿರುವ ವಿಷಯ ತಿಳಿಸಿದ್ದರು. ಈ ರೀತಿ ಸಾಲ ಮಂಜೂರಾಗಿ ಖಾತೆಗೆ ಜಮೆಯಾದ ಬಳಿಕ ವಿವಿಧ ಕಂತುಗಳಲ್ಲಿ ಹಣವನ್ನು ಲಪಟಾಯಿಸಲಾಗಿದೆ.
ಹ್ಯಾಕರ್‌ಗಳ ಕೈಚಳಕದಿಂದ ಶಿಕ್ಷಕಿ ಈಗ ಕಂಗಾಲಾಗಿದ್ದು, ತಮಗಾಗಿರುವ ಅನ್ಯಾಯದ ಬಗ್ಗೆ ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿದ್ದಾರೆ.