ಮುಂಬೈ: ಅಡವಿಡಲು ಕೊಂಡೊಯ್ಯುತ್ತಿದ್ದ ಚಿನ್ನಾಭರಣದ ಕವರ್ ಅನ್ನು ವಡಾಪಾವ್ ಎಂದು ಕೊಟ್ಟ ಮಹಿಳೆ; ಒಣ ಬ್ರೆಡ್‌ ಎಂದು ತಿಪ್ಪೆಗೆಸೆದ ಭಿಕ್ಷುಕಿ!

ಮುಂಬೈ (ಮಹಾರಾಷ್ಟ್ರ): ವಡಾ ಪಾವ್​ ಪೊಟ್ಟಣವೆಂದು​ ಮಹಿಳೆಯೊಬ್ಬರು ಆಕಸ್ಮಿಕವಾಗಿ ಭಿಕ್ಷುಕಿಗೆ ತನ್ನ ಚಿನ್ನಾಭರಣದ ಕವರ್ ಅನ್ನೇ ಕೊಟ್ಟು ಪೇಚಿಗೆ ಸಿಲುಕಿಕೊಂಡಿದ್ದಾಳೆ. ಮಹಿಳೆಯಿಂದ ಪೊಟ್ಟಣ ಪಡೆದ ಆ ಭಿಕ್ಷುಕಿ ಅದನ್ನು ಒಣ ಬ್ರೆಡ್​ ಎಂದು ಅಂದುಕೊಂಡು ತಿಪ್ಪೆಗೆಸೆದು ಹೋಗಿದ್ದಾಳೆ. ಇಂತಹ ವಿಚಿತ್ರ ಪ್ರಕರಣವೊಂದು ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಚಿನ್ನಾಭರಣವಿದ್ದ ಬ್ಯಾಗ್ ಪತ್ತೆ ಹಚ್ಚಿ, ಅದನ್ನು ಮಹಿಳೆಗೊಪ್ಪಿಸುವ ಮೂಲಕ ಪ್ರಕರಣ ಸುಖಾಂತ್ಯಗೊಂಡಿದೆ.

ಮುಂಬೈನ ಅರೇಯಾ ಪ್ರದೇಶದ ನಿವಾಸಿ ಮಹಿಳೆ ಇತ್ತೀಚೆಗೆ ತಮ್ಮ ಪುತ್ರಿಯ ವಿವಾಹಕ್ಕೆ ಮಾಡಿರುವ ಸಾಲವನ್ನು ತೀರಿಸಲೆಂದು 100 ಗ್ರಾಂ ಚಿನ್ನಾಭರಣವನ್ನು ಬ್ಯಾಂಕ್​ನಲ್ಲಿ ಅಡವಿಡಲು ಹೋಗುತ್ತಿದ್ದರು. ಈ ಸಂದರ್ಭ ಭಿಕ್ಷುಕಿಯೊಬ್ಬಳು ಮತ್ತು ಆಕೆಯ ಮಗು ಎದುರಾಗಿದ್ದಾರೆ. ಅನುಕಂಪದಿಂದ ಮಹಿಳೆ ತನ್ನ ಬ್ಯಾಗ್​ನಲ್ಲಿದ್ದ ವಡಾ ಪಾವ್​ ಇದ್ದ ಕವರ್ ಅನ್ನು ಕೊಟ್ಟಿದ್ದಾಳೆ.

ಮಹಿಳೆ ಬ್ಯಾಂಕ್​ಗೆ ಹೋಗಿ ಬ್ಯಾಗ್​ ಪರಿಶೀಲನೆ ನಡೆಸಿದ್ದಾರೆ. ಆಗ ಚಿನ್ನಾಭರಣದ ಕವರ್ ಕಾಣಿಸಿಲ್ಲ. ಆಗ ಆಕೆಗೆ, ತಾನು ಭಿಕ್ಷುಕಿಗೆ ಕೊಟ್ಟಿರುವ ವಡಾಪಾವ್​ ತುಂಬಿದ್ದ ಕವರ್‌ನಲ್ಲಿ ಚಿನ್ನಾಭರಣಗಳೂ ಇದ್ದವು ಎಂಬುವುದು ತಿಳಿದು ಬಂದಿದೆ. ತಕ್ಷಣವೇ ಭಿಕ್ಷುಕಿ ಇದ್ದ ಜಾಗಕ್ಕೆ ಮರಳಿ ಬಂದಿದ್ದಾಳೆ. ಆದರೆ, ಅಲ್ಲಿ ಭಿಕ್ಷುಕಿ ಕಾಣಿಸಿಲ್ಲ. ಹೀಗಾಗಿ ಅಲ್ಲಿಂದ ಪೊಲೀಸ್​ ಠಾಣೆಗೆ ತೆರಳಿ ದೂರು ಕೊಟ್ಟಿದ್ದಾಳೆ.

ಆದರೆ, ಆ ಮಹಿಳೆ ಕೊಟ್ಟಿರುವ ಕವರ್​ನಲ್ಲಿ ಚಿನ್ನಾಭರಣ ಇರುವುದು ಭಿಕ್ಷುಕಿಗೂ ತಿಳಿದಿಲ್ಲ. ಆಕೆ ಅದನ್ನು ಒಣ ಬ್ರೆಡ್​ ಎಂದು ಕಸದ ತಿಪ್ಪೆಗೆಸೆದು ಹೋಗಿದ್ದಾಳೆ. ಚಿನ್ನಾಭರಣ ಕಾಣೆಯಾದ ಬಗ್ಗೆ ದೂರು ಸ್ವೀಕರಿಸಿದ್ದ ಪೊಲೀಸರು  ತನಿಖೆ ನಡೆಸುತ್ತಿದ್ದಾಗ ಈ ವಿಚಾರ ಬಹಿರಂಗವಾಗಿದೆ.

ಭಿಕ್ಷುಕಿ ಚಿನ್ನಾಭರಣವನ್ನು ಕಸದ ರಾಶಿಗೆಸೆದ ವಿಚಾರ ಖಚಿತಪಡಿಸಿಕೊಂಡು ಸಿಸಿಟಿವಿಗಳ ಪರಿಶೀಲನೆ ನಡೆಸಿದಾಗ ಕಸದ ರಾಶಿಯಲ್ಲಿ ಆ ಚಿನ್ನಾಭರಣದ ಬ್ಯಾಗ್​ ಕಾಣಿಸಿದೆ. ಸ್ಥಳಕ್ಕೆ ಹೋದಾಗ ಚಿನ್ನಾಭರಣದ ಬ್ಯಾಗ್​ ಸುತ್ತ ಇಲಿಯೊಂದು ಸುಳಿದಾಡುತ್ತಿತ್ತು. ಇಲಿಯನ್ನು ಪೊಲೀಸರು ಓಡಿಸಲು ಮುಂದಾಗ ಅದು ಹತ್ತಿರದ ಒಳಚರಂಡಿಯ ರಂಧ್ರದೊಳಗೆ ಚಿನ್ನಾಭರಣದ ಬ್ಯಾಗ್​ ಸಮೇತ ಪ್ರವೇಶಿಸಿದೆ. ನಂತರ ಪೊಲೀಸರು ಆ ರಂಧ್ರದಿಂದ ಇಲಿಯನ್ನು ಓಡಿಸಿ ಬ್ಯಾಗ್ ಹೊರತೆಗೆದು ಮಹಿಳೆಗೊಪ್ಪಿಸಿದ್ದಾರೆ.