
ನಕಲಿ ವೈದ್ಯಕೀಯ ಪ್ರಮಾಣ ಪತ್ರ ಜಾಲದಲ್ಲಿ ಬಂಧನಕ್ಕೀಡಾಗಿದ್ದ ಆರೋಪಿಯ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆ!
6/20/2022 05:37:00 AM
ಉಳ್ಳಾಲ: ರೈಲ್ವೆ ನೌಕರರಿಗೆ ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಿರುವ ಪ್ರಕರಣದಲ್ಲಿ ಸಿಬಿಐ ದಾಳಿಗೊಳಗಾಗಿ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಬಳಿಯ ಹಾಸ್ಪಿಟಲ್ ಫಾರ್ಮಸಿಸ್ಟ್ ವಿಜಯನ್ ವಿ.ಎ. ಎಂಬವರು ತೊಕ್ಕೊಟ್ಟಿನ ರೈಲ್ವೇ ಹಳಿಯಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಮಂಗಳೂರನ್ನು ಕೇಂದ್ರವಾಗಿಟ್ಟು ರೈಲ್ವೇ ನೌಕರರಿಗೆ ನಕಲಿ ವೈದ್ಯಕೀಯ ಪ್ರಮಾಣಪತ್ರ ಒದಗಿಸುತ್ತಿದ್ದ ಜಾಲವೊಂದನ್ನು ಸಿಬಿಐ ಅಧಿಕಾರಿಗಳು ಇತ್ತೀಚೆಗೆ ಭೇದಿಸಿ ಮೂವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಆರೋಗ್ಯ ಕೇಂದ್ರದ ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಶಿವಶಂಕರ ಮೂರ್ತಿ, ಔಷಧಾಲಯದ ಅಧಿಕಾರಿ ವಿಜಯನ್ ವಿ.ಎ. ಮತ್ತು ಇವರಿಗೆ ದಲ್ಲಾಳಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಗಳೂರಿನ ಇಬ್ರಾಹಿಂ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.
ಪ್ರಕರಣದಲ್ಲಿ ಸಿಬಿಐ ವಶವಾಗಿದ್ದ ಪ್ರಮುಖ ಆರೋಪಿ ವಿಜಯನ್ ವಿ.ಎ. ಇಂದು ಮಧ್ಯಾಹ್ನ ತೊಕ್ಕೊಟ್ಟು ಸಮೀಪದ ಕಾಪಿಕಾಡು ಸಮೀಪದ ರೈಲ್ವೇ ಹಳಿಯಲ್ಲಿ ರೈಲು ಬಡಿದು ಸಾವನ್ನಪ್ಪಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ವಿಜಯನ್ ಆತ್ಮಹತ್ಯೆ ಮಾಡಿರುವುದಾಗಿ ಹೇಳಲಾಗುತ್ತಿದ್ದರೂ ಪೊಲೀಸರ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ. ಘಟನಾ ಸ್ಥಳಕ್ಕೆ ರೈಲ್ವೇ ಮತ್ತು ಉಳ್ಳಾಲ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.