ಓರ್ವ ಕೊಲೆಯ ಹಿಂದಿದ್ದರು 16 ಮಂದಿ: 14 ಮಂದಿ ಅರೆಸ್ಟ್, ಮತ್ತಿಬ್ಬರ ಪತ್ತೆಗೆ ಪೊಲೀಸ್ ಕಾರ್ಯಾಚರಣೆ

ಕೋಲಾರ: ಜಿಲ್ಲೆಯ ನಗರಸಭೆಯ ಸದಸ್ಯನೋರ್ವನ ಹತ್ಯೆಯ ಹಿಂದೆ 16 ಮಂದಿ ದುಷ್ಕರ್ಮಿಗಳಿದ್ದಾರೆ ಎಂದು ಪೊಲೀಸ್ ತಂಡ ಪತ್ತೆ ಮಾಡಿದೆ. ಸದ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಕೋಲಾರದ ಮುಳಬಾಗಿಲು ಪಟ್ಟಣದ ನಗರಸಭೆಯ ಸದಸ್ಯ ಜಗನ್ಮೋಹನ ರೆಡ್ಡಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಜೂನ್ 7ರಂದು ಈ ಹತ್ಯೆ ಮಾಡಲಾಗಿತ್ತು. ಇದೀಗ ಈ ಕೊಲೆಗೆ ಸಂಬಂಧಿಸಿದಂತೆ ಬಾಲಾಜಿ ಸಿಂಗ್, ರೋಹಿತ್ ಕುಮಾರ್, ಮನೋಜ್, ಧನು, ಜಗನ್, ಅಭಿನಂದನ್, ಧನಂಜಯ್, ಮಹೇಶ್ ನವೀನ್ ಸೇರಿದಂತೆ 14ಮಂದಿಯನ್ನು ಬಂಧಿಸಲಾಗಿದೆ. ಕೊಲೆ ಕೃತ್ಯ ಎಸಗಿರುವ ಹಾಗೂ ಸಹಕಾರ ನೀಡಿರುವ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ.

ಪೊಲೀಸರು ನಾಲ್ಕು ತಂಡಗಳಾಗಿ ಕಾರ್ಯಾಚರಣೆ ನಡೆಸಿ ಕುಪ್ಪಂ, ಮೈಸೂರು, ಗೋವಾ, ಮಹಾರಾಷ್ಟ್ರ,  ವಿಜಯವಾಡಗಳಲ್ಲಿ ಅಡಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ‌.