ಶಿವಮೊಗ್ಗ: ಹಸುಗೂಸುಗಳೆರಡನ್ನು ನೇಣು ಬಿಗಿದು ಕೊಂದ ತಾಯಿಯೊಬ್ಬಳು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಚೊರಡಿ ಗ್ರಾಮದಲ್ಲಿ ನಡೆದಿದೆ. ಪತಿಯ ಮನೆಯಲ್ಲಿ ವರದಕ್ಷಿಣೆ ಕಿರುಕುಳವನ್ನು ಸಹಿಸಲಾಗದೆ ಆಕೆ ಈ ಕೃತ್ಯ ಎಸಗಿರುವುದಾಗಿ ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಸಾಸ್ವೆಹಳ್ಳಿ ಗ್ರಾಮದ ತಿಪ್ಪೆರುದ್ರಸ್ವಾಮಿ ಎಂಬುವವರ ಪುತ್ರಿ ಜ್ಯೋತಿಯನ್ನು ಶಿವಮೊಗ್ಗದ ಚೊರಡಿ ಗ್ರಾಮದ ಶಿವಮೂರ್ತಿ ಎಂಬಾತನಿಗೆ 2018ರಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಈ ವೇಳೆ ವರದಕ್ಷಿಣೆಯನ್ನೂ ನೀಡಿ ಅದ್ಧೂರಿಯಾಗಿ ವಿವಾಹ ಮಾಡಿ ಕೊಡಲಾಗಿತ್ತು. ಮದುವೆಯ ವೇಳೆ ಶಿವಮೂರ್ತಿ ತಾನು ಅರಣ್ಯ ಇಲಾಖೆ ನೌಕರನೆಂದು ನಂಬಿಸಿ ಹೆಚ್ಚಿನ ವರದಕ್ಷಿಣೆಯನ್ನು ಕೇಳಿದ್ದ. ಅದರಂತೆ ಆತ ಕೇಳಿದಷ್ಟು ವರದಕ್ಷಿಣೆಯನ್ನೂ ನೀಡಲಾಗಿತ್ತು. ಆದರೆ ಶಿವಮೂರ್ತಿ ಅರಣ್ಯ ಇಲಾಖೆಯ ದಿನಗೂಲಿ ನೌಕರ ಎಂಬುದು ಆ ಬಳಿಕ ತಿಳಿದು ಬಂದಿದೆ.
ಇದೀಗ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಮದುವೆಯಾದ ದಿನದಿಂದ ಶಿವಮೂರ್ತಿ ಹಾಗೂ ಆತನ ಕುಟುಂಬಸ್ಥರು ಜ್ಯೋತಿಗೆ ಪದೇ ಪದೇ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಪರಿಣಾಮ ಮನನೊಂದ ಜ್ಯೋತಿ ಮಕ್ಕಳೊಂದಿಗೆ ತವರಿಗೆ ಸೇರಿದ್ದರು. ವಾರದ ಹಿಂದೆಯಷ್ಟೇ ಜ್ಯೋತಿಯನ್ನು ಅಲ್ಲಿಂದ ಒತ್ತಾಯಪೂರ್ವಕವಾಗಿ ಪತಿಯ ಮನೆಯವರು ತಮ್ಮ ಮನೆಗೆ ಕರೆತಂದಿದ್ದರು. ಜ್ಯೋತಿಯ ಕುಟುಂಬಸ್ಥರು ತಮ್ಮ ಪುತ್ರಿಯ ಬಳಿ 50 ಸಾವಿರ ರೂ. ಹಣವನ್ನು ನೀಡಿ ಪತಿಯ ಮನೆಗೆ ಕಳುಹಿಸಿದ್ದರು. ಈ ಮೊದಲೂ ಸಹ ಅವರು ಹಣ ನೀಡಿದ್ದರೆಂದು ತಿಳಿದುಬಂದಿದೆ.
ಆದರೆ ಪುತ್ರಿಯನ್ನು ಪತಿಯ ಮನೆಗೆ ಕಳುಹಿಸಿದ ಒಂದೇ ವಾರದಲ್ಲಿ ಜ್ಯೋತಿ ಹಾಗೂ ಆಕೆಯ ಇಬ್ಬರು ಮಕ್ಕಳಾದ ಸಾನ್ವಿ(2) ಹಾಗೂ 11 ತಿಂಗಳಿನ ಕುಶಾಲ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತಿಯ ಮನೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಜ್ಯೋತಿ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೂವರನ್ನು ಕೊಲೆಗೈದು ನೇಣು ಹಾಕಿದ್ದಾರೆ ಎಂದು ಜ್ಯೋತಿ ಕುಟುಂಬದವರು ಕುಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತಿ ಶಿವಮೂರ್ತಿ ಹಾಗೂ ಕುಟುಂಬದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.