-->

ಹೈದರಾಬಾದ್ ನಲ್ಲೊಂದು ಮರ್ಯಾದಾ ಹತ್ಯೆ: ಪತ್ನಿಯ ಸಹೋದರನಿಂದ ಬಾಮೈದುನನ ಹತ್ಯೆ

ಹೈದರಾಬಾದ್ ನಲ್ಲೊಂದು ಮರ್ಯಾದಾ ಹತ್ಯೆ: ಪತ್ನಿಯ ಸಹೋದರನಿಂದ ಬಾಮೈದುನನ ಹತ್ಯೆ

ಹೈದರಾಬಾದ್(ತೆಲಂಗಾಣ): ಹೈದರಾಬಾದ್ ನಲ್ಲಿ ಭೀಕರವಾದ ಮರ್ಯಾದಾ ಹತ್ಯೆಯೊಂದು ನಡೆದಿದ್ದು, ಯುವಕನನ್ನು ಮಾರ್ಗಮಧ್ಯಯೇ ಬರ್ಬರವಾಗಿ ಮಾರಕಾಯುಧಗಳಿಂದ ಕಡಿದು ಕೊಲೆ ಮಾಡಲಾಗಿದೆ. ಇದೀಗ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ಶೇಂಗಾ ವ್ಯಾಪಾರ ಮಾಡುತ್ತಿದ್ದ, ಕೊಲ್ಸವಾಡಿಯ ಬೇಗಂಬಜಾರ್ ನಿವಾಸಿ ನೀರಜ್ ಕುಮಾರ್ ಪನ್ವಾರ್ (22)  ಒಂದುವರೆ ವರ್ಷದ ಹಿಂದೆ ಅದೇ ಗ್ರಾಮದ ಸಂಜನಾ (20) ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದ. ಈ ದಂಪತಿಗೆ ಒಂದೂವರೆ ತಿಂಗಳ ಹಿಂದೆ ಗಂಡು ಮಗುವೊಂದು ಜನಿಸಿದೆ. ಆದರೆ ಸಂಜನಾ ಸಹೋದರ ಮಾತ್ರ ಬಾಮೈದುನನ ವಿರುದ್ಧ ಸೇಡಿನ ಕತ್ತಿ ಮಸೆಯುತ್ತಲೇ ಇದ್ದ. ಆರು ತಿಂಗಳಿಂದಲೂ ಈತ ಬಾಮೈದುನ ನೀರಜ್‌ ಹತ್ಯೆಗೆ ಸಂಚು ರೂಪಿಸುತ್ತಲೇ ಇದ್ದನಂತೆ. 

ಒಂದು ವಾರದಿಂದ ಈತ ನೀರಜ್​ನ ಚಟುವಟಿಕೆಗಳ ಮೇಲೆ ಕಣ್ಣು ಇಟ್ಟಿದ್ದ. ಶುಕ್ರವಾರ ಮೋಡ ಕವಿದ ವಾತಾವರಣವಿದ್ದು, ರಾತ್ರಿ ವೇಳೆ ವಾಹನ ಮತ್ತು ಜನ ಸಂಚಾರ ವಿರಳವಾಗಿತ್ತು. ಇದು ನೀರಜ್​ನನ್ನು ಹತ್ಯೆಗೆ ಸರಿಯಾದ ಸಮಯವೆಂದು ಸಂಜನಾಳ ಸಹೋದರ ತನ್ನ ಸಹಚರರನ್ನು ಸ್ಥಳಕ್ಕೆ ಕರೆಸಿದ್ದಾನೆ. ನೀರಜ್ ತನ್ನ ತಾತನೊಂದಿಗೆ ಮೀನು​ ಮಾರುಕಟ್ಟೆ​ಗೆ ಬಂದಿದ್ದನು. ಈ ವೇಳೆ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಸಂಜನಾಳ ಸಹೋದರನ ಗ್ಯಾಂಗ್​ ಗ್ರಾನೈಟ್ ಕಲ್ಲಿನಿಂದ ನೀರಜ್ ತಲೆಗೆ ಹೊಡೆದಿದ್ದಾರೆ. ಬಳಿಕ ಎಲ್ಲರೂ ಎಳನೀರು ತುಂಡರಿಸಲು ಉಯೋಗಿಸುವ ಕತ್ತಿಯಿಂದ ನೀರಜ್​ ನನ್ನು ಮನಸೋಇಚ್ಛೆ ಕಡಿದು ಪರಾರಿಯಾಗಿದ್ದಾರೆ. 

ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಶಾಹಿನಾಯತ್ ಗಂಜ್ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ನೀರಜ್​ನನ್ನು ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ನೀರಜ್​ ಮೃತಪಟ್ಟಿದ್ದಾರೆಂದು ಆಸ್ಪತ್ರೆ ವೈದ್ಯರು ಘೋಷಿಸಿದ್ದಾರೆ. ನೀರಜ್ ಹತ್ಯೆ ಮಾಡಿದವರು ಐವರು ಎಂದು ಪೊಲೀಸರು ಖಚಿತಪಡಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಹತ್ತು ಜನರನ್ನು ಬಂಧಿಸಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಶಾಸಕ ರಾಜಾಸಿಂಗ್​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಂತರ್ಜಾತಿ ವಿವಾಹವಾಗಿರುವ ನೀರಜ್, ತನ್ನ ಪತ್ನಿಯ ಮನೆಯವರಿಂದ ತನಗೆ ಬೆದರಿಕೆ ಇದೆ ಎಂದು ಒಂದು ವರ್ಷದ ಹಿಂದೆ ಅಫ್ಜಲಗಂಜ್ ಪೊಲೀಸರನ್ನು ಸಂಪರ್ಕಿಸಿದ್ದರು. ರಕ್ಷಣೆ ನೀಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನೀರಜ್ ಸಾವಿನಿಂದ ಆಕ್ರೋಶಗೊಂಡ ಬೇಗಂಬಜಾರ್ ವ್ಯಾಪಾರಿಗಳು ಶುಕ್ರವಾರ ಮಧ್ಯರಾತ್ರಿಯ ವೇಳೆಗೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಶನಿವಾರ ಬೇಗಂಬಜಾರ್ ಬಂದ್‌ಗೆ ಕರೆ ನೀಡಲಾಗಿದೆ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಮರ್ಯಾದೆ ಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article