
ಕೃಷಿ ಹೊಂಡಕ್ಕೆ ಬಿದ್ದು ದುರ್ಮರಣಕ್ಕೀಡಾದ ಮೂವರು ಸೋದರಿಯರು
Tuesday, May 17, 2022
ಗದಗ: ನೀರು ಕುಡಿಯಲೆಂದು ಹೋಗಿದ್ದ ಮೂವರು ಸೋದರಿಯರು ಕೃಷಿ ಹೊಂಡಕ್ಕೆ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ದುರ್ಘಟನೆಯೊಂದು ಮುಂಡರಗಿ ತಾಲೂಕಿನ ಅತ್ತಿಕಟ್ಟಿ ತಾಂಡಾದಲ್ಲಿ ಸೋಮವಾರ ನಡೆದಿದೆ.
ಅತ್ತಿಕಟ್ಟಿ ತಾಂಡಾದ ಸುನೀತಾ(13), ಅಂಕಿತಾ(10) ಹಾಗೂ ಡೋಣಿ ತಾಂಡಾದ ಸುನೀತಾ ಲೋಕೇಶ್ ಲಮಾಣಿ(10) ಮೃತಪಟ್ಟ ದುರ್ದೈವಿ ಬಾಲಕಿಯರು.
ಬಸವರಾಜ ನೂರಪ್ಪ ಲಮಾಣಿ ಎಂಬುವವರಿಗೆ ಸೇರಿರುವ ಜಮೀನೊಂದರಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಾಲಕಿಯರು ಕುರಿ ಮರಿಯನ್ನು ಮೇಯಿಸಲು ಜಮೀನಿಗೆ ಬಂದಿದ್ದರು. ಬಿಸಿಲಿನ ಧಗೆಗೆ ನೀರಿನ ದಾಹ ತೀರಿಸಿಕೊಳ್ಳಲು ಕೃಷಿ ಹೊಂಡಕ್ಕೆ ಇಳಿದಿದ್ದಾರೆ. ಆಗ ಮೂವರೂ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ. ತಂದೆ, ತಾಯಿಯೊಂದಿಗೆ ಗೋವಾದಲ್ಲಿ ವಾಸವಿರುವ ಅತ್ತಿಕಟ್ಟಿ ತಾಂಡಾದ ಸುನೀತಾ ಹಾಗೂ ಅಂಕಿತಾ ಚಿಕ್ಕಪ್ಪನ ಮದುವೆಗೆಂದು ಊರಿಗೆ ಬಂದಿದ್ದರು ಎಂದು ತಿಳಿದು ಬಂದಿದೆ.
ಮೃತದೇಹಗಳನ್ನು ಕೃಷಿಹೊಂಡದಿಂದ ಮೇಲೆತ್ತಲಾಗಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮನಕಲಕುವಂತಿತ್ತು. ಮುಂಡರಗಿ ತಹಶೀಲ್ದಾರ ಆಶಪ್ಪ ಪೂಜಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.