
ಮಂಗಳೂರು: ಪ್ರೇಯಸಿಯಿಂದ ಪೊಲೀಸ್ ದೂರು; ಟವರ್ ಏರಿ ಕುಳಿತ ಭಗ್ನಪ್ರೇಮಿಯಿಂದ ಅವಾಂತರ!
4/18/2022 12:19:00 AM
ಮಂಗಳೂರು: ಪ್ರೇಯಸಿಯೇ ತನ್ನ ವಿರುದ್ಧ ದೂರು ನೀಡಿದ್ದಾಳೆಂದು ಮನನೊಂದ ಭಗ್ನಪ್ರೇಮಿಯೋರ್ವನು ಟವರ್ ಏರಿ ಕುಳಿತು ಅವಾಂತರ ಸೃಷ್ಟಿಸಿರುವ ಘಟನೆ ಇಂದು ನಗರದ ಹೊರವಲಯದ ಅಡ್ಯಾರ್ ಬಳಿ ನಡೆದಿದೆ.
ಅಡ್ಯಾರ್ ನಿವಾಸಿ ಸುಧೀರ್ ಎಂಬಾತ ಅವಾಂತರ ಸೃಷ್ಟಿಸಿದ ಭಗ್ನಪ್ರೇಮಿ. ಅಡ್ಯಾರ್ ನಲ್ಲಿ ಬಸ್ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಈತ ಪರಂಗಿಪೇಟೆಯ ಮಾರಿಪಳ್ಳ ನಿವಾಸಿ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆಕೆ ಮಾತ್ರ ಸುಧೀರ್ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಳು. ಆದರೆ ಸುಧೀರ್ ಮಾತ್ರ ಆಕೆಯನ್ನು ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಈತನ ಕಿರುಕುಳದಿಂದ ಬೇಸತ್ತ ಯುವತಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಭಗ್ನಪ್ರೇಮಿಯ ವಿರುದ್ಧ ದೂರು ನೀಡಿದ್ದಳು.
ಪರಿಣಾಮ ಮನನೊಂದ ಸುಧೀರ್ ಇಂದು ಟವರ್ ಏರಿ ಅವಾಂತರ ಸೃಷ್ಟಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಢಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭಗ್ನಪ್ರೇಮಿಯನ್ನು ಟವರ್ ನಿಂದ ಕೆಳಗಿಳಿಸಲು ಶತಪ್ರಯತ್ನ ಮಾಡಿದರೂ ಸಾಧ್ಯವಾಗಿರಲಿಲ್ಲ. ಕೊನೆಗೆ ಯುವತಿಯೇ ಸ್ಥಳಕ್ಕಾಗಮಿಸಿ ದೂರು ವಾಪಸ್ ತೆಗೆದುಕೊಳ್ಳುವೆ ಎಂದು ಆತನ ಮನವೊಲಿಕೆ ಮಾಡಿದ್ದಾಳೆ. ಆ ಬಳಿಕ ಭಗ್ನ ಪ್ರೇಮಿ ಸುಧೀರ್ ಟವರ್ ನಿಂದ ಇಳಿದಿದ್ದಾನೆ. ಈ ಮೂಲಕ ಕೆಲ ಕಾಲ ಆತಂಕ ಸೃಷ್ಟಿಸಿರುವ ಪ್ರಕರಣವೊಂದು ಸುಖಾಂತ್ಯಗೊಂಡಿದೆ.