ಮಂಗಳೂರು: ಸಾರ್ವಜನಿಕರೋರ್ವರಿಗೆ ಹಾಗೂ ಚಿಕನ್ ಮಳಿಗೆಯ ಸಿಬ್ಬಂದಿಗೆ ಕಲ್ಲು, ಹೆಲ್ಮೆಟ್ ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ, ಚೂರಿ ತೋರಿಸಿ ಸಾರ್ವಜನಿಕ ಸ್ಥಳದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿರುವ ರೌಡಿಶೀಟರ್ ಗಳಿಬ್ಬರನ್ನು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಗರದ ಬಜಾಲ್, ಜಲ್ಲಿಗುಡ್ಡೆ ಜಯನಗರ ನಿವಾಸಿ ಪ್ರೀತಂ ಪೂಜಾರಿ (27) ಹಾಗೂ ಎಕ್ಕೂರು, ಅಳಪೆ ನಿವಾಸಿ ಧೀರಜ್ ಕುಮಾರ್ (25) ಬಂಧಿತ ಆರೋಪಿಗಳು.
ಆರೋಪಿಗಳಾದ ಪ್ರೀತಂ ಪೂಜಾರಿ ಹಾಗೂ ಧೀರಜ್ ಕುಮಾರ್ ನಿನ್ನೆ ಸಂಜೆ 6.30ರ ಸುಮಾರಿಗೆ ನಗರದ ವೆಲೆನ್ಸಿಯಾ ಜಂಕ್ಷನ್ ಬಳಿಯ ಐಡಿಯಲ್ ಚಿಕನ್ ಅಂಗಡಿಯ ಬಳಿ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸುತ್ತಿದ್ದರು. ಇದನ್ನು ಐಡಿಯಲ್ ಚಿಕನ್ ಮಳಿಗೆಯ ಸಿಬ್ಬಂದಿ ಪ್ರಶ್ನಿಸಿದ್ದಾರೆ. ಆಗ ರೌಡಿಶೀಟರ್ ಗಳಿಬ್ಬರೂ ಐಡಿಯಲ್ ಚಿಕನ್ ಮಳಿಗೆಯ ಸಿಬ್ಬಂದಿ ಸುನೀಲ್ ಮಾರ್ಡಿ, ಅನಂತ ಹಾಗೂ ಜೀವನ್ ಎಂಬವರಿಗೆ ಕಲ್ಲು, ಹೆಲ್ಮೆಟ್ ಗಳಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅವರಿಗೆ ಚೂರಿಗಳಿಂದ ತಿವಿಯಲು ಯತ್ನಿಸಿದ್ದಾರೆ.
ಇದನ್ನು ಕಂಡ ಸಾರ್ವಜನಿಕರು ಅದನ್ನು ತಡೆಯಲು ಹೋಗಿದ್ದಾರೆ. ಆಗ ಅವರು ಸಾರ್ವಜನಿಕರಿಗೂ ಚಾಕುವಿನಿಂದ ತಿವಿಯಲು ಯತ್ನಿಸಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಅಲ್ಲದೆ ಸಾರ್ವಜನಿಕರೊಂದಿಗೆ ಉರುಡಾಡಿ ಬಿದ್ದ ಪರಿಣಾಮ ಆರೋಪಿಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ.
ಆರೋಪಿಗಳಿಂದ ಎರಡು ಚೂರಿಗಳು, ಕಲ್ಲು, ಹೆಲ್ಮೆಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಬ್ಬರೂ ಮದ್ಯಸೇವನೆ ಮಾಡಿದ್ದು, ಪ್ರೀತಂ ಪೂಜಾರಿ ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ತಪಾಸಣೆಯಿಂದ ದೃಢಗೊಂಡಿದೆ. ಅಲ್ಲದೆ ಆರೋಪಿಗಳಿಬ್ಬರೂ ರೌಡಿಶೀಟರ್ ಗಳಾಗಿದ್ದು, ಇವರ ಮೇಲೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಇದೀಗ ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.