ಅನ್ಯಜಾತಿಯವನನ್ನು ವಿವಾಹವಾದ ಸೋದರಿಯನ್ನು ಚಿಕ್ಕಪ್ಪನೊಂದಿಗೆ ಸೇರಿ ಗುಂಡಿಕ್ಕಿ ಕೊಂದ ಸಹೋದರ

ಮೈನ್​ಪುರಿ(ಉತ್ತರ ಪ್ರದೇಶ): ಅನ್ಯ ಜಾತಿಯವನನ್ನು ಪ್ರೇಮ ವಿವಾಹ ಮಾಡಿಕೊಂಡಿದ್ದ ಸಹೋದರಿಯನ್ನು ಚಿಕ್ಕಪ್ಪನೊಂದಿಗೆ ಸೇರಿ ಸಹೋದರನೇ ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಮೈನ್​​ಪುರಿಯಲ್ಲಿ ನಡೆದಿದೆ. ಗುಂಡಿನ ದಾಳಿಯಲ್ಲಿ ಯುವತಿಯ ಪತಿ ಹಾಗೂ ಅತ್ತೆ ಕೂಡಾ ಗಾಯಗೊಂಡಿದ್ದಾರೆ. 

ಎಪ್ರಿಲ್ 20ರಂದು ಯುವತಿಯು ಕುಟುಂಬಸ್ಥರ ವಿರೋಧದ ನಡುವೆ ನೆರೆಮನೆಯಾತನೊಂದಿಗೆ ಪ್ರೇಮ ವಿವಾಹ ಮಾಡಿಕೊಂಡಿದ್ದಳು. ಇದರಿಂದ ಆಕ್ರೋಶಗೊಂಡಿದ್ದ ಸಹೋದರ ಚಿಕ್ಕಪ್ಪನ ಜೊತೆ ಸೇರಿ ಹಾಡಹಗಲೇ ತನ್ನ ತಂಗಿ, ಆಕೆಯ ಪತಿ ಹಾಗೂ ಅತ್ತೆಯ ಮೇಲೆ ಗುಂಡು ಹಾರಿಸಿದ್ದಾನೆ. ಘಟನೆಯ ಬಳಿಕ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವಕ ಹಾಗೂ ಆತನ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನಡೆಸಲಾಗಿದೆ.

ಭರತ್ವಾಲ್ ನಿವಾಸಿ ಕೋಮಲ್​ ಎಂಬ ಯುವತಿ ತನ್ನ ತಾಯಿ ಹಾಗೂ ಮಾವನ ಒಪ್ಪಿಗೆ ಪಡೆದು ನೆರೆ ಮನೆಯ ಅನ್ಯ ಜಾತಿಯ ಯುವಕನನ್ನು  ಎಪ್ರಿಲ್​ 20ರಂದು ಪ್ರೇಮ ವಿವಾಹವಾಗಿದ್ದಳು. ಇದರಿಂದ ಆಕೆಯ ಸಹೋದರ ಹಾಗೂ ಚಿಕ್ಕಪ್ಪ ಕುಪಿತಗೊಂಡಿದ್ದರು.‌ ಮದುವೆಯಾದ ಬೆನ್ನಲ್ಲೇ ಆರೋಪಿಗಳು ಈ ಕೃತ್ಯವೆಸಗಿದ್ದಾರೆ. ಇದೀಗ ಆರೋಪಿಗಳ ಬಂಧನಕ್ಕಾಗಿ ಮೂರು ತಂಡ ರಚನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.