ಮೈಸೂರು: ಹಾಡಹಗಲೇ ಕಾರೊಂದನ್ನು ಅಡ್ಡಗಟ್ಟಿ ದಾಳಿ ನಡೆಸಿರುವ ಮುಸುಕುಧಾರಿ ದುಷ್ಕರ್ಮಿಗಳು ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿಯ ಕಡಕೋಳ ಬಳಿ ನಡೆದಿದೆ. ಪರಿಣಾಮ ಸ್ಥಳೀಯರಲ್ಲಿ ಆತಂಕಕ್ಕೆ ಮನೆಮಾಡಿದೆ.
ಸುಮಾರು ಏಳೆಂಟು ಮುಸುಕುಧಾರಿ ದುಷ್ಕರ್ಮಿಗಳು ದೊಣ್ಣೆಗಳನ್ನು ಹಿಡಿದುಕೊಂಡು ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಚಾಲಕ ಪಾರಾಗಲು ಯತ್ನ ಮಾಡಿದರೂ ಬಿಡದ ಗುಂಪು ಒಳಗೆ ತಳ್ಳಿ ಕಾರಿನ ಸಮೇತ ಪರಾರಿಯಾಗಿದ್ದಾರೆ. ಈ ಸಂದರ್ಭ ಎದುರಿನಿಂದ ಬರುತ್ತಿದ್ದ ವಾಹನದಲ್ಲಿದ್ದ ಪ್ರಯಾಣಿಕರು ತಮ್ಮ ಮೊಬೈಲ್ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಕ್ಷಣ ಸ್ಥಳದಲ್ಲಿದ್ದವರು ಧಾವಿಸುವಷ್ಟರಲ್ಲಿ ದುಷ್ಕರ್ಮಿಗಳ ಗುಂಪು ಕಾರಿನ ಸಮೇತ ಪರಾರಿಯಾಗಿದೆ.
ಘಟನೆ ನಡೆದಿದ್ದೇಕೆ? ದಾಳಿ ಮಾಡಿದ ಗುಂಪು ಎಲ್ಲಿಯವರು? ಮುಸುಕು ಧರಿಸಿ ದಾಳಿ ಮಾಡಿರುವ ಹಿನ್ನಲೆ ಏನು? ಎಂಬ ಹಲವಾರು ಪ್ರಶ್ನೆಗಳು ಉದ್ಭವಿಸಿದೆ. ಸದ್ಯ ಮೊಬೈಲ್ನಲ್ಲಿ ಸೆರೆಯಾಗಿರುವ ದೃಶ್ಯಗಳು ಪೊಲೀಸರ ಕೈ ಸೇರಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜಾಲತಾಣದಲ್ಲಿಯೂ ವೀಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಪೊಲೀಸ್ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ.