
ಬೂಸ್ಟರ್ ಡೋಸೆಜ್ ಪಡೆದವರಿಗೆ ಕೋವಿಡ್ ಸೋಂಕು ತಗಲುವುದಿಲ್ಲ: ಅಧ್ಯಯನ ವರದಿ
4/26/2022 08:05:00 AM
ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿನ 4ನೇ ಅಲೆಯ ಆತಂಕ ಆರಂಭವಾಗಿದೆ. ಆದರೆ ಲಸಿಕೆ ಹಾಕಿಸಿಕೊಂಡವರೆಲ್ಲರೂ ಸ್ವಲ್ಪ ಮಟ್ಟಿಗೆ ನಿರಾಳರಾಗಿರಬಹುದು. ಅಲ್ಲದೆ ಬೂಸ್ಟರ್ ಡೋಸ್ ಪಡೆದುಕೊಂಡ ಶೇ.70 ರಷ್ಟು ಮಂದಿಗೆ ಕೋವಿಡ್ ಸೋಂಕು ತಗುಲುವುದಿಲ್ಲದೆಂಬ ವಿಚಾರ ಅಧ್ಯಯನದಿಂದ ತಿಳಿದುಬಂದಿದೆ.
ದೇಶಾದ್ಯಂತ ಬೂಸ್ಟರ್ ಲಸಿಕೆಯನ್ನು ಪಡೆದುಕೊಂಡ 6 ಸಾವಿರ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇನ್ನು ಮೂರನೇ ಲಸಿಕೆ ಪಡೆಯದವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿವೆ ಎಂದು ಇಂಡಿಯಾ ಮೆಡಿಕಲ್ ಅಸೋಸಿಯೇಷನ್ ನ್ಯಾಷನಲ್ ಟಾಸ್ಕ್ ಫೋರ್ಸ್ ತಿಳಿಸಿದೆ.
5971 ಮಂದಿ ಲಸಿಕೆ ಪಡೆದವರಲ್ಲಿ ಶೇ.24ರಷ್ಟು ಮಂದಿ 40 ವರ್ಷದೊಳಗಿನವರಾಗಿದ್ದರು. ಇನ್ನು ಶೇ.50ರಷ್ಟು ಮಂದಿ 40 ರಿಂದ 59 ವರ್ಷದೊಳಗಿನವರಾಗಿದ್ದರು. ಇದರಲ್ಲಿ ಶೇ.45ರಷ್ಟು ಮಹಿಳೆಯರನ್ನು ಸಮೀಕ್ಷೆಗೊಳಪಡಿಸಲಾಗಿತ್ತು. ಎರಡು ಲಸಿಕೆ ಬಳಿಕ ತೆಗೆದುಕೊಳ್ಳುವ ಬೂಸ್ಟರ್ ಡೋಸ್ ಕೋವಿಡ್ ಸೋಂಕಿನಿಂದ ಸಂಪೂರ್ಣವಾಗಿ ರಕ್ಷಿಸುತ್ತದೆ ಎಂದು ಈ ಅಧ್ಯಯನದಿಂದ ತಿಳಿದುಬಂದಿದೆ. ಇನ್ನು ಮೂರನೇ ಲಸಿಕೆ ಪಡೆದವರನ್ನು ಕೋವಿಡ್ ಮೂರನೇ ಅಲೆ ಸಂದರ್ಭದಲ್ಲಿ ಸಮೀಕ್ಷೆಗೆ ಒಳಪಡಿಸಲಾಗಿತ್ತು.