ಮೆಕ್ ಡೊನಾಲ್ಡ್ ನಲ್ಲಿ ಅಡುಗೆ ಕೆಲಸ ಮಾಡುವ ಯುವಕನಿಗೆ ಸೇನಾಧಿಕಾರಿಂದ ಬಂಪರ್ ಆಫರ್: ಹಾಗಾದರೆ ಈತ ಮಾಡಿದ್ದಾದರೂ ಏನು ಗೊತ್ತೇ?

ನೋಯ್ಡಾ: ಮೆಕ್‌ಡೋನಾಲ್ಡ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿರುವ 19ರ ಹರೆಯದ ಯುವಕನೋರ್ವನು ಕೆಲಸ ಮುಗಿಸಿ ಓಡುತ್ತಲೇ ಮನೆ ಸೇರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ವೀಡಿಯೋ ಅಪ್ಲೋಡ್​ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿರುವ ಕೇವಲ 4 ಗಂಟೆಯಲ್ಲಿ 12 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಇದೀಗ ಈ ಯುವಕ ದೇಶಕ್ಕೆ ಸ್ಫೂರ್ತಿಯ ಚಿಲುಮೆಯಾಗಿ ಹೊರಹೊಮ್ಮಿದ್ದಾನೆ ಅಲ್ಲದೆ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಮೂಲತಃ ಉತ್ತರಾಖಂಡ ಮೂಲದವನಾದ ಪ್ರದೀಪ್ ಮೆಹ್ರಾ (19) ನೋಯ್ಡಾದಲ್ಲಿ ಮೆಕ್‌ಡೋನಾಲ್ಡ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾನೆ. ಕೆಲಸ ಮುಗಿದಾದ ಬಳಿಕ ಈತ ನಿತ್ಯ ಮಧ್ಯರಾತ್ರಿ ಬರೋಬ್ಬರಿ 10 ಕಿ.ಮೀ. ಓಡುತ್ತಲೇ ಬರೋಲಾದಲ್ಲಿರುವ ತನ್ನ ಮನೆ ಸೇರುತ್ತಾರೆ. ಆತ ಭಾರತೀಯ ಸೇನೆ ಸೇರುವ ಹಂಬಲದಿಂದ ಈ ರೀತಿ ಓಡುತ್ತಾನಂತೆ.


ಸೇನೆಯ ಸೇರ್ಪಡೆಗೆ ದೈಹಿಕವಾಗಿ ಸದೃಢವಾಗಿರಬೇಕು. ಬೆಳಗ್ಗೆ ವ್ಯಾಯಾಮ, ಜಾಗಿಂಗ್, ಜಿಮ್​ಗೆ ಹೋಗಲು ನನ್ನ ಬಳಿ ಸಮಯವಿಲ್ಲ. ಹಾಗಾಗಿ, ಮಧ್ಯರಾತ್ರಿವರೆಗೂ ಕೆಲಸ ಮಾಡುತ್ತೇನೆ. ಬಳಿಕ ಮನೆಗೆ ಓಡುತ್ತಲೇ ಹಿಂತಿರುಗುತ್ತೇನೆ. ಸಿಗುವ ವೇತನದಲ್ಲೇ ತಾಯಿಯ ಆರೋಗ್ಯ ನೋಡಿಕೊಳ್ಳುಬೇಕು, ಮನೆ ಖರ್ಚು ನಿಭಾಯಿಸಬೇಕು. ಜೊತೆಗೆ ನನ್ನ ದೇಹವನ್ನು ಫಿಟ್​ ಆಗಿ ಇಟ್ಟುಕೊಳ್ಳಬೇಕು. ಈ ನಡುವೆ ನಾನು ಸೇನೆ ಸೇರಲೆಂದು ಪ್ರತಿ ರಾತ್ರಿ ನಗರದ ರಸ್ತೆಗಳಲ್ಲಿ 10 ಕಿ.ಮೀ ಓಡುತ್ತಲೇ ಮನೆ ಸೇರುತ್ತೇನೆ ಎಂದು ಹೇಳುತ್ತಾರೆ.




ಪ್ರದೀಪ್ ಮೆಹ್ರಾ ಈ ರೀತಿ ಓಡುತ್ತಿರುವುದನ್ನು ಗಮನಿಸಿರುವ ಸಿನಿಮಾ ನಿರ್ಮಾಪಕ ಮತ್ತು ಲೇಖಕ ವಿನೋದ್ ಕಪ್ರಿಯವರು ಈ ರೀತಿ ಓಡುತ್ತಿರುವುದು ಯಾಕೆ?, ಕಾರಿನಲ್ಲಿ ಮನೆಗೆ ಬಿಡುತ್ತೇನೆ ಎಂದು ವಿನಂತಿಸಿದ್ದಾರೆ. ಆದರೆ, ಇದು ಸೇನೆ ಸೇರಿಕೊಳ್ಳಲು ನಾನು ಮಾಡುತ್ತಿರುವ ಅಭ್ಯಾಸ. ನನ್ನ ಬಳಿ ಹೆಚ್ಚು ಸಮಯವಿಲ್ಲ ಎಂದು ಓಡುತ್ತಲೇ ಯುವಕ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈತನ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ನಿವೃತ್ತ ಜನರಲ್​​ ಸತೀಸ್​ ದುವಾ ಟ್ವೀಟ್ ಮಾಡಿದ್ದು, ಪ್ರದೀಪ್ ಮೆಹ್ರಾಗೆ ಭಾರತೀಯ ಸೇನೆ ಸೇರಲು ಸಕಲ ರೀತಿಯ ತರಬೇತಿ ನೀಡಲು ಸಿದ್ಧರಾಗಿರುವುದಾಗಿ ಪ್ರಕಟಿಸಿದ್ದಾರೆ.


ಭಾರತೀಯ ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ತಾನು ಪ್ರದೀಪ್ ಮೆಹ್ರಾಗೆ ಎಲ್ಲ ರೀತಿಯಿಂದಲೂ ಸಹಕರಿಸುವುದಾಗಿ ಪ್ರಕಟಿಸಿದ್ದಾರೆ. ಸೇನಾ ಕಮಾಂಡರ್​​ ಲೆಫ್ಟಿನೆಂಟ್ ಜನರಲ್​ ರಾಣಾ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ತಮ್ಮ ರೆಜಿಮೆಂಟ್​​ನಲ್ಲಿ ನೇಮಕಾತಿ ಮಾಡಿಕೊಳ್ಳಲು ತರಬೇತಿ ನೀಡುವುದಾಗಿ ತಿಳಿಸಿದ್ದಾಗಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.