ಬೆಂಗಳೂರು: ರಸ್ತೆಗುಂಡಿಗೆ ಬೈಕ್ ಸವಾರ ಬಲಿ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಮತ್ತೋರ್ವ ಬೈಕ್ ಸವಾರ ಬಲಿಯಾದ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌. ಎಂ.ಎಸ್. ಪಾಳ್ಯದ ಮುನೇಶ್ವರ ಲೇಔಟ್‌ನಲ್ಲಿ ಭಾನುವಾರ ರಾತ್ರಿ ರಸ್ತೆ ಗುಂಡಿಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಇಂದು ಮೃತಪಟ್ಟಿದ್ದಾನೆ. 

 ಹಾವೇರಿ ಮೂಲದ ಅಶ್ವಿನ್(27) ಎಂಬ ಯುವಕ ಮೃತಪಟ್ಟವರು. 

ಜಲಮಂಡಳಿಯವರು ಕಾಮಗಾರಿ ನಡೆಸಲು ಅಗೆದಿದ್ದ ರಸ್ತೆ ಗುಂಡಿ ಅಪಘಾತ ಸಂಭವಿಸಿದೆ. ಘಟನೆಗೆ ಬಿಬಿಎಂಪಿ, ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣವೆಂದು ಅಶ್ವಿನ್ ಬಿದ್ದ ಜಾಗದಲ್ಲಿ ಆತನ ಸ್ನೇಹಿತರು ಕುಳಿತು ಪ್ರತಿಭಟಿಸಿದ್ದಾರೆ. ಅಶ್ವಿನ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ಪೋಷಕರಿಗೆ ಓರ್ವನೇ ಪುತ್ರ ಎಂದು ತಿಳಿದು ಬಂದಿದೆ. ಈ ಬಗ್ಗೆ ಯಲಹಂಕ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.‌ ಮೃತನ ಪೋಷಕರು ಬಿಬಿಎಂಪಿ, ಬಿಡ್ಲ್ಯೂಎಸ್​ಎಸ್‌ಬಿ ವಿರುದ್ಧ ದೂರು ದಾಖಲಿಸಿದ್ದಾರೆ.

ಆದರೆ ಬೈಕ್ ಸವಾರ ಅಶ್ವಿನ್ ಹೆಲ್ಮೆಟ್ ಇಲ್ಲದೇ ಸವಾರಿ ಮಾಡಿರೋದು ಬೆಳಕಿಗೆ ಬಂದಿದೆ. ಎಫ್​ಐಆರ್​​ನಲ್ಲಿ ಈ ಅಂಶವನ್ನು ಸೇರಿಸಿ ಪೊಲೀಸರು ತನಿಖೆ ನಡೆಸಲಿದ್ದಾರೆ‌. ಡ್ರಿಂಕ್​ ಆ್ಯಂಡ್ ಡ್ರೈವ್ ಬಗ್ಗೆ ರಿಪೋರ್ಟ್ ಇನ್ನಷ್ಟೇ ಬರಬೇಕಿದೆ. ಆ ಬಳಿಕ ಮತ್ತೊಂದು ಎಫ್​ಐಆರ್ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಉತ್ತರ ವಲಯ ಟ್ರಾಫಿಕ್ ಡಿಸಿಪಿ ಸವಿತಾ ತಿಳಿಸಿದ್ದಾರೆ.