5 ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಯಸಿಯ ಮೇಲೆ ಪೆಟ್ರೋಲ್ ಎರಚಿ ಬೆಂಕಿಯಿಟ್ಟ ಪ್ರಿಯಕರ: ಯುವತಿ ಮೃತ್ಯು!

ಬೆಂಗಳೂರು: ಐದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಪ್ರೇಯಸಿಯನ್ನು ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಹತ್ಯೆ ಮಾಡಿರುವ ಆರೋಪ ಪ್ರಿಯಕರನ ವಿರುದ್ಧ ಕೇಳಿಬಂದಿದೆ. ಸುಟ್ಟ ಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾಳೆ.

ದಾನೇಶ್ವರಿ ಮೃತಪಟ್ಟ ಪ್ರೇಯಸಿ. ಪ್ರಿಯಕರ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. 

ವಿಜಯಪುರದ ತಾಳಿಕೋಟೆ ಮೂಲದ ದಾನೇಶ್ವರಿ ಹಾಗೂ ಶಿವಕುಮಾರ್ 2018ರಿಂದ ಪರಸ್ಪರ ಪ್ರೀತಿಯ ಬಲೆಗೆ ಬಿದ್ದಿದ್ದರು. ವಿಜಯಪುರದ ಬಿಎಲ್​ಡಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭ ಇಬ್ಬರ ನಡುವೆ ಪ್ರೀತಿ ಮೊಳೆತಿತ್ತು. ವಿದ್ಯಾಭ್ಯಾಸದ ಬಳಿಕ ಶಿವಕುಮಾರ್​, ಇಲೆಕ್ಟ್ರಾನಿಕ್ ಸಿಟಿ ಸಮೀಪದ ವೀರಸಂದ್ರದ ಸ್ಟೇನ್​ ಲೇ ಕಂಪೆನಿಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದ. ಇತ್ತೀಚೆಗೆ ದಾನೇಶ್ವರಿಯನ್ನು ಶಿವಕುಮಾರ್​ ಕಡೆಗಣಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ, ಮದುವೆ ವಿಚಾರವಾಗಿಯೂ ಇಬ್ಬರ ನಡುವೆ ಜಗಳವಾಗಿತ್ತು ಎಂದು ಹೇಳಲಾಗಿದೆ. 

ಆದ್ದರಿಂದ ಫೋನ್ ಕರೆ ಮಾಡಿದರೂ ಸ್ವೀಕರಿಸದಿರುವುದರಿಂದ ಇತ್ತೀಚೆಗೆ ಶಿವಕುಮಾರ್ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ದಾನೇಶ್ವರಿ ಬಂದಿದ್ದಳು. ಈ ವೇಳೆ ಮದುವೆಯ ವಿಚಾರದಲ್ಲಿ ಕಂಪೆನಿ ಮುಂಭಾಗವೇ ಇಬ್ಬರ ನಡುವೆ ಜಗಳವಾಗಿತ್ತು ಎನ್ನಲಾಗಿದೆ. ಆಗ ಬಾಟಲ್​ನಲ್ಲಿ ಪೆಟ್ರೋಲ್ ತಂದು ದಾನೇಶ್ವರಿ ಮೇಲೆ ಶಿವಕುಮಾರ್ ಎರಚಿ, ಬೆಂಕಿ ಹಚ್ಚಿರುವ ಆರೋಪ ಕೇಳಿಬಂದಿದೆ. 

ಬೆಂಕಿ ಹಚ್ಚಿದ ಬಳಿಕ ದಾನೇಶ್ವರಿಯನ್ನು ತಾನೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ ಶಿವಕುಮಾರ್. ಆದರೆ, ಚಿಕಿತ್ಸೆ ಫಲಕಾರಿಯಾಗದೇ ದಾನೇಶ್ವರಿ ಮೃತಪಟ್ಟಿದ್ದಾಳೆಂದು ತಿಳಿದುಬಂದಿದೆ. ಈ ಸಂಬಂಧ ಇಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್​ 307 ಮತ್ತು ಎಸ್​ಸಿ-ಎಸ್​ಟಿ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಎರಡು ದಿನಗಳ ಹಿಂದೆ ಈ ಹೀನ ಕೃತ್ಯ ನಡೆದಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೆ ದಾನೇಶ್ವರಿ ಕೊನೆಯುಸಿರೆಳೆದಿದ್ದಾಳೆ.