ಕೊಯಿಕ್ಕೋಡ್: ಕೇರಳದ ಕೋಯಿಕ್ಕೋಡ್ ನ ಜೋಯಿಲ್ಯಾಂಡ್ ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದ ಬಿಜಿಶಾ ಎಂಬ ಯುವತಿಯ ಸಾವಿನ ಪ್ರಕರಣದಲ್ಲಿ ಮಹತ್ವದ ಸುಳಿವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಈ ಮೂಲಕ ಆಕೆಯ ಆರ್ಥಿಕ ವ್ಯವಹಾರವೇ ಸಾವಿಗೆ ಮೂಲ ಎಂಬ ಮಹತ್ವದ ಮಾಹಿತಿಯನ್ನು ಕಲೆಹಾಕಿದ್ದಾರೆ.
ಅವಿವಾಹಿತೆಯಾಗಿರುವ ಬಿಜಿಶಾ ಮೃತದೇಹವು 2021ರ ಡಿ.12ರಂದು ಜೊಯಿಲ್ಯಾಂಡಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರೀಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಆತ್ಮಹತ್ಯೆ ಹಿಂದಿನ ಸುಳಿವನ್ನು ಕಂಡುಹಿಡಿಯುವಲ್ಲಿ ಪೊಲೀಸರು ವಿಫಲವಾಗಿದ್ದರು. ಪ್ರಕರಣ ನಡೆದ ತಿಂಗಳ ಬಳಿಕ ಇದೀಗ ಬಿಜಿಶಾ ಸಾವಿನ ಹಿಂದಿನ ಕಾರಣವನ್ನು ಪೊಲೀಸರು ಬಯಲು ಮಾಡಿದ್ದಾರೆ.
ಆಕೆ ಯುಪಿಐ ಆ್ಯಪ್ ಮೂಲಕ ಬಿಜಿಶಾ ತನ್ನ ಎರಡು ಬ್ಯಾಂಕ್ ಖಾತೆಗಳಿಂದ ಬರೋಬ್ಬರಿ 1 ಕೋಟಿ ರೂ. ವ್ಯವಹಾರ ನಡೆಸಿರುವುದು ಇದೀಗ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ವಿಚಾರ ಆಕೆಯ ಆಪ್ತರಿಗಾಗಲಿ ಅಥವಾ ಕುಟುಂಬಕ್ಕಾಗಲಿ ತಿಳಿದಿರಲಿಲ್ಲ. ಇದಲ್ಲದೇ ಆಕೆಯ ಮದುವೆಗಾಗಿ ಎತ್ತಿಟ್ಟಿದ್ದ 35 ಪವನ್ ಚಿನ್ನಾಭರಣವನ್ನೂ ಸಹ ಬ್ಯಾಂಕ್ ಸಾಲಕ್ಕೆ ಅಡ ಇಡಲಾಗಿತ್ತು. ಬಿಜಿಶಾ ಸಾವಿನ ಬಳಿಕ ಬ್ಯಾಂಕ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಕುಟುಂಬ ಇದೇ ಸಂದರ್ಭ ಬಹಿರಂಗಪಡಿಸಿದೆ.
ಆಕೆ ನಡೆಸಿರುವ ಸಂಪೂರ್ಣ ವಹಿವಾಟುಗಳು ಯುಪಿಐ ಅಪ್ಲಿಕೇಶನ್‌ಗಳ ಮೂಲಕ ನಡೆದಿರುವುದಿಂದ ಯಾವುದೇ ಮಾಹಿತಿಯನ್ನು ಹಿಂಪಡೆಯಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಪೊಲೀಸರ ಪ್ರಕಾರ, ಹಣವನ್ನು ಸಾಲ ಪಡೆದವರಿಗೆ ಪಾವತಿ ಅಪ್ಲಿಕೇಶನ್‌ಗಳ ಮೂಲಕ ವಹಿವಾಟು ನಡೆಸುವಂತೆ ಹೇಳಲಾಗಿತ್ತು. ಆಕೆ ಆ್ಯಪ್‌ಗಳ ಮೂಲಕ ತನ್ನ ಎಲ್ಲಾ ವಹಿವಾಟಿನ ಸಾಕ್ಷಿಗಳನ್ನು ನಾಶಪಡಿಸಲು ಪ್ರಯತ್ನಿಸಿದ್ದಾಳೆ. ಬಿ.ಎಡ್ ಪದವೀಧರೆಯಾಗಿರುವ ಬಿಜಿಶಾ ಖಾಸಗಿ ಟೆಲಿಕಾಂ ಕಂಪೆನಿಯೊಂದರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.
ಆಕೆಯ ಇಷ್ಟೊಂದು ಪ್ರಮಾಣದ ಹಣದ ವ್ಯವಹಾರವನ್ನು ನೋಡಿ ಪೊಲೀಸರೇ ಬೆರಗಾಗಿದ್ದಾರೆ. ಅಗಾಧ ಪ್ರಮಾಣದ ಹಣದ ವ್ಯವಹಾರವೇ ಆಕೆಯ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಡಿಸೆಂಬರ್ 12ರಂದು ಎಂದಿನಂತೆ ಮನೆಗೆ ಮರಳಿದ ಬಿಜಿಶಾ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯ ಆತ್ಮಹತ್ಯೆಯ ಹಿಂದಿನ ಸತ್ಯಾಂಶ ಬೆಳಕಿಗೆ ಬರಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.