ಆನ್ಲೈನ್ ಖರೀದಿ ವಂಚನೆ: ಐಫೋನ್‌ ಬದಲಿಗೆ ಸೋಪ್ ಬಂತು, ಆರ್ಡರ್ ಮಾಡಿದ ಮಹಿಳೆಗೆ ಕಾದಿತ್ತು ಶಾಕ್

ಲಂಡನ್: ಇ-ಕಾಮರ್ಸ್ ವೆಬ್‌ ಸೈಟ್‌ ಮೂಲಕ ದುಬಾರಿ ವಸ್ತುಗಳನ್ನು ಆನ್ಲೈನ್‌ ಆರ್ಡರ್ ಮಾಡುವ ಸಂದರ್ಭ ಭಾರೀ ಜಾಗರೂಕರಾಗಿರಬೇಕು. ಬಹಳಷ್ಟು ಮಂದಿ ದುಬಾರಿ ಬೆಲೆಯ ಉತ್ತನ್ನಗಳಿಗೆ ಕಡಿಮೆ ಬೆಲೆಯ ವಸ್ತುಗಳನ್ನು ಪಡೆದಿರುವ ಅನೇಕ ಉದಾಹರಣೆಗಳು ಬಹಳಷ್ಟು ನಡೆದಿದೆ. ಈ ರೀತಿಯ ಪ್ರಕರಣಗಳು ವಿರಳವಾಗಿ ನಡೆದರೂ, ಇದರಿಂದ ಆನ್‌ ಲೈನ್‌ನಲ್ಲಿ ಉತ್ಪನ್ನಗಳನ್ನು ಖರೀದಿ ಮಾಡುವ ವ್ಯಕ್ತಿಯ ಆತ್ಮವಿಶ್ವಾಸವೇ ಕಳೆದುಕೊಳ್ಳುವಂತೆ ಮಾಡುತ್ತದೆ.

ಯುಕೆ ಮೂಲದ ಮಹಿಳೆಯೋರ್ವರು ಆ್ಯಪಲ್‌ ಕಂಪೆನಿಯ ಅತ್ಯಂತ ದುಬಾರಿ ಬೆಲೆಯ ಸ್ಮಾರ್ಟ್‌ಫೋನೊಂದನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದಾರೆ. ಆದರೆ ಆಕೆಯ ಆರ್ಡರ್ ಪ್ಯಾಕ್ ನಲ್ಲಿ ಫೋನ್ ಬದಲಿಗೆ ಸಾಬೂನು ಬಂದಿದೆ. 

ಕೆಲವು ತಿಂಗಳ ಹಿಂದೆ ಇದೇ ರೀತಿ ಕೇರಳದ ವ್ಯಕ್ತಿಯೊಬ್ಬರು ಆ್ಯಪಲ್ ಐಫೋನ್ ಆರ್ಡರ್ ಮಾಡಿದ್ದರು. ಅವರಿಗೆ ಐಫೋನ್ ಬದಲಿಗೆ ಪಾತ್ರೆ ತೊಳೆಯುವ ಸೋಪ್ ಹಾಗೂ 5 ರೂ‌. ನಾಣ್ಯವು ಬಂದಿತ್ತು. ಈ ಮಹಿಳೆಗೂ ಅದೇ ರೀತಿ ಐಫೋನ್ ಬದಲು ಸೋಪು ಮನೆಗೆ ಬಂದಿದೆ.

ಖೌಲಾ ಲಫಾಯ್ಲಿ ಎಂಬ ಮಹಿಳೆ ಸ್ಥಳೀಯ ಇ-ಕಾಮರ್ಸ್ ಆ್ಯಪ್ ಮುಖೇನ ಐಫೋನ್ 13 ಪ್ರೋ ಮ್ಯಾಕ್ಸ್ ಆರ್ಡರ್ ಮಾಡಿದ್ದಾರೆ. ಕೆಲವು ದಿನಗಳ ಬಳಿಕ ಆಕೆಯ ಮನೆಗೆ ಒಂದು ಬಾಟಲ್ ಹ್ಯಾಂಡ್ ವಾಶ್ ಸೋಪ್ ತಲುಪಿದೆ.

ಆ್ಯಪಲ್ ಇನ್ಸೈಡರ್ ನ ವರದಿ ಪ್ರಕಾರ, ವಿತರಣೆಯ ಸಮಯದಲ್ಲಿ ವಂಚನೆ ನಡೆದಿದೆ. ಮೊಬೈಲ್ ನ್ನು 36 ತಿಂಗಳ ಒಪ್ಪಂದದ ಮೇಲೆ ಸ್ಕೈ ಮೊಬೈಲ್ ಮೂಲಕ ಖರೀದಿಸಲಾಗಿದೆ. ಐಫೋನ್ ನ 13 ಪ್ರೋ ಮ್ಯಾಕ್ಸ್ ನ ಬೆಲೆ ಸುಮಾರು ಸರಿಸುಮಾರು 1.5 ಲಕ್ಷ ರೂ. ಆಗಿದೆ. ಆದರೆ ಮಹಿಳೆ ಇದರ ಸಂಪೂರ್ಣ ಮೊತ್ತವನ್ನು ಪಾವತಿ ಮಾಡಿಲ್ಲ. ಭಾರತದಲ್ಲಿ ಇದೇ ಸ್ಮಾರ್ಟ್ ಫೋನ್ ಗೆ ಭಾರತದಲ್ಲಿ 1,29,900 ರೂ. ಇದೆ.