
ಇಂಡೋನೇಷ್ಯಾ: ತರಗತಿಗೆ ವಿದ್ಯಾರ್ಥಿಗಳು ತಂದ ಸ್ಮಾರ್ಟ್ ಫೋನ್ ಗಳನ್ನು ಬೆಂಕಿಗೆ ಹಾಕಿ ಸುಟ್ಟ ಶಿಕ್ಷಕಿ
2/25/2022 09:07:00 PM
ಇಂಡೋನೇಷ್ಯಾ: ಕೊರೊನಾ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಆನ್ ಲೈನ್ ತರಗತಿಗಳಿಗೆ ಸ್ಮಾರ್ಟ್‌ಫೋನ್ ಕಡ್ಡಾಯವಾಗಿತ್ತು. ಪ್ರಪಂಚದ ಯಾವುದೇ ದೇಶಗಳಿರಲಿ ಆ ಬಳಿಕ ಹೆಚ್ಚಿನ ವಿದ್ಯಾರ್ಥಿಗಳು ಫೋನ್ ಗಳ ದಾಸರಾಗಿದ್ದಾರೆ.
ಇದೀಗ ಆನ್‌ಲೈನ್ ತರಗತಿಗಳು ಮುಗಿದು ಶಾಲೆ ಆರಂಭವಾದರೂ ಮಕ್ಕಳಿಗೆ ಫೋನ್ ಗಳು ಬೇಕಾಗಿದೆ. ಎಷ್ಟೋ ಶಾಲೆಗಳಲ್ಲಿ ಮೊಬೈಲ್ ಫೋನ್ ಗಳನ್ನು ಶಾಲೆಗೆ ತರುವುದು ಬ್ಯಾನ್ ಆಗಿದ್ದರೂ, ಮಕ್ಕಳು ಕದ್ದುಮುಚ್ಚಿ ಫೋನ್ ಗಳನ್ನು ಶಾಲೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಶಿಕ್ಷಕರು ಸಿಟ್ಟಾಗುವುದು, ಅವರನ್ನು ದಂಡನೆಗೊಳಪಡಿಸುವುದು ಇದ್ದೇ ಇದೆ. ಇದೇ ರೀತಿಯ ಘಟನೆಯಿಂದ ಭಾರೀ ಎಡವಟ್ಟೊಂದು ಇಂಡೋನೇಷ್ಯಾ ದೇಶದಲ್ಲಿ ಆಗಿದೆ.
ವಿದ್ಯಾರ್ಥಿಗಳು ತರಗತಿಯೊಳಗೆ ಮೊಬೈಲ್ ಫೋನ್ ಗಳನ್ನು ತಂದಿರುವುದನ್ನು ಕಂಡ ಸಿಟ್ಟುಗೊಂಡ ಶಿಕ್ಷಕಿಯೊಬ್ಬರು ಕೋಪಗೊಂಡು ಆ ಸ್ಮಾರ್ಟ್‌ಫೋನ್‌ಗಳನ್ನು ಸುಟ್ಟು ಹಾಕಿದ್ದು, ಅದರ ವೀಡಿಯೋ ಭಾರೀ ವೈರಲ್ ಆಗಿದೆ. ಶಾಲಾ ಶಿಕ್ಷಕರ ಗುಂಪು ಕ್ಲಾಸ್ ರೂಂನಲ್ಲಿದ್ದ ಮಕ್ಕಳ ಸ್ಮಾರ್ಟ್‌ಫೋನ್‌ಗಳನ್ನು ಕಿತ್ತುಕೊಂಡಿದೆ. ಬಳಿಕ ಶಿಕ್ಷಕಿಯೊಬ್ಬರು ಬೆಂಕಿಯಲ್ಲಿ ಅದನ್ನು ಹಾಕಿದ್ದಾರೆ. ವಿದ್ಯಾರ್ಥಿಗಳು ತಮ್ಮ ಮೊಬೈಲ್ ಫೋನ್ ಗಳನ್ನು ವಾಪಸ್ ನೀಡಬೇಕು ಎಂದು ಮನವಿ ಮಾಡಿದರೂ, ಅತ್ತು ಕರೆದು ಕೇಳಿದರೂ ಶಿಕ್ಷಕರ ಮನಕರಗದೆ ಆ ಮೊಬೈಲ್ಗಳನ್ನು ಸುಟ್ಟು ಹಾಕಿ, ಶಿಕ್ಷೆಯನ್ನು ನೀಡಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಪರ-ವಿರೋಧಗಳ ಚರ್ಚೆ ವ್ಯಕ್ತವಾಗಿದೆ.