ಸುಳ್ಯ: ಕುಕ್ಕರ್ ಸ್ಪೋಟಗೊಂಡು ಗೃಹಿಣಿ ಸ್ವಲ್ಪದರಲ್ಲೇ ಅಪಾಯದಿಂದ ಪಾರು

ಸುಳ್ಯ: ಅಡುಗೆ ಮಾಡಲೆಂದು ಗ್ಯಾಸ್‌ ಸ್ಟೌ ಮೇಲಿಟ್ಟ ಕುಕ್ಕರ್ ಸ್ಪೋಟಗೊಂಡ ಪರಿಣಾಮ   ಗೃಹಣಿಯೊಬ್ಬರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿರುವ ಘಟನೆ ಸುಳ್ಯ ತಾಲೂಕಿನ ಕಳಂಜ ಗ್ರಾಮದಲ್ಲಿ ನಿನ್ನೆ ನಡೆದಿದೆ. 

ಕಳಂಜ ಗ್ರಾಮದ ಕಿಲಂಗೋಡಿಯ ವಾಸುದೇವ ಆಚಾರ್ಯರ ಮನೆಯಲ್ಲಿ ಕುಕ್ಕರ್ ಸ್ಪೋಟಗೊಂಡಿದ್ದು, ಅವರ ಪತ್ನಿ ಸುಮಾ ವಿ. ಆಚಾರ್ಯ ಅಪಾಯದಿಂದ ಪಾರಾಗಿದ್ದಾರೆ‌. ಸುಮಾ ಅವರು ಬೆಳಗ್ಗಿನ ಉಪಹಾರಕ್ಕೆಂದು ಕುಕ್ಕರ್‌ನಲ್ಲಿ ಪಲಾವ್ ಇಟ್ಟಿದ್ದರು. ಕುಕ್ಕರ್‌ನಲ್ಲಿ ಒಂದು ವಿಷಲ್ ಆಗುವ ಹೊತ್ತಿಗೆ ಹೊರಗಿನಿಂದ ಯಾರೋ ಕರೆದ ಧ್ವನಿ ಕೇಳಿಸಿ ಹೊರಗೆ ಬಂದರೆನ್ನಲಾಗಿದೆ. 

ಈ ಹೊತ್ತಿಗಾಗಲೇ ಕುಕ್ಕರ್ ಸ್ಪೋಟಗೊಂಡು ಮೇಲ್ಛಾವಣಿವರೆಗೆ ಹಾರಿ ಹಾನಿಯಾಗಿದೆ. ಜೊತೆಗೆ ಗ್ಯಾಸ್‌ ಸ್ಟೌಗೂ ಹಾನಿಯಾಗಿದೆ. ಕುಕ್ಕರ್ ಒಳಗಿದ್ದ ಆಹಾರವೂ ಮನೆಯೊಳಗಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಕುಕ್ಕರ್‌ ನ ವಿಷಲ್  ಸುಮಾರು 10 ಮೀಟರ್ ದೂರಕ್ಕೆ ಚಿಮ್ಮಿದೆ. ಆದರೆ ಸುಮಾ ಅವರು ಹೊರ ಹೋದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.