
ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಾಟದ 25.18 ಲಕ್ಷ ರೂ. ವಿದೇಶಿ ಕರೆನ್ಸಿ ಪತ್ತೆ
2/09/2022 08:36:00 PM
ಮಂಗಳೂರು: ನಗರದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಾಟದ ಲಕ್ಷಾಂತರ ರೂ. ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿದೆ.
ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದ ವೇಳೆ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ 25.18 ಲಕ್ಷ ರೂ. ಮೌಲ್ಯದ ಯುಎಇ ದಿರಮ್ ಹಾಗೂ ಯುಎಸ್ ಡಾಲರ್ ಅನ್ನು ವಶಪಡಿಸಿಕೊಂಡಿದ್ದಾರೆ. ಏರ್ ಇಂಡಿಯಾ ವಿಮಾನದಲ್ಲಿ ದುಬೈಗೆ ಪ್ರಯಾಣಿಸಲು ಸಿದ್ಧನಾಗಿದ್ದ ಪ್ರಯಾಣಿಕನಲ್ಲಿ 90,000 ಯುಎಇ ದಿರಮ್ ನೋಟು ಪತ್ತೆಯಾಗಿದೆ. ಇದರ ಭಾರತೀಯ ಮೌಲ್ಯ 17,77,500 ರೂ. ಆಗಿದೆ.
ಅದೇ ರೀತಿ ಮತ್ತೊಂದು ಪ್ರಕರಣದಲ್ಲಿ ಕೇರಳದ ಕಾಸರಗೋಡು ಮೂಲದ ಪ್ರಯಾಣಿಕ ಇಂಡಿಗೋ ವಿಮಾನದ ಮೂಲಕ ಮಂಗಳೂರಿನಿಂದ ಶಾರ್ಜಾಕ್ಕೆ ಹೋಗಲನುವಾಗಿದ್ದ. ಕಸ್ಟಮ್ಸ್ ತಪಾಸಣೆ ವೇಳೆ ಈತನಲ್ಲಿ ಅಕ್ರಮ ಸಾಗಾಟದ 10,000 ಯುಎಸ್ ಡಾಲರ್ ಪತ್ತೆಯಾಗಿದೆ. ಇದರ ಭಾರತೀಯ ಮೌಲ್ಯ 7,40,500 ರೂ. ಆಗಿದೆ. ಈ ಮೂಲಕ ಇಬ್ಬರು ಪ್ರಯಾಣಿಕರಿಂದ 28.18 ಲಕ್ಷ ರೂ. ಅಕ್ರಮ ಸಾಗಾಟದ. ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಸೊತ್ತು ಸಹಿತ ವಶಕ್ಕೆ ಪಡೆದುಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.