ಸೆಕ್ಸ್​ - ಹಣಕ್ಕಾಗಿ ಪತ್ನಿಯರನ್ನೇ ವಿನಿಮಯ ಮಾಡುವ ದಂಧೆ ಬಯಲಿಗೆ: ಟೆಲಿಗ್ರಾಂ, ಮೆಸೆಂಜರ್​ನಲ್ಲಿ ಗ್ರೂಪ್​ ರಚಿಸಿ ಕೃತ್ಯ

ತಿರುವನಂತಪುರಂ(ಕೇರಳ): ಇಂತಹ ನೀಚರು ಇರುತ್ತಾರೆಯೇ ಎಂದು ಹೇಸಿಗೆ ಪಡುವಂತಹ ಘಟನೆ ಕೇರಳದಲ್ಲಿ ನಡೆದಿದೆ. ಇಲ್ಲಿ ಸೆಕ್ಸ್​ ಹಾಗೂ ಹಣಕ್ಕಾಗಿ ಪತ್ನಿಯರನ್ನೇ ವಿನಿಮಯ ಮಾಡಿಕೊಳ್ಳುವ ಭಾರೀ ಮಟ್ಟದ ದಂಧೆಯೊಂದು ನಡೆಯುತ್ತಿದೆ. ಈ ಕಾಮುಕರು ಟೆಲಿಗ್ರಾಂ, ಮೆಸೆಂಜರ್​ನಲ್ಲಿ ಅದಕ್ಕಾಗಿಯೇ ಗ್ರೂಪ್​ ಗಳನ್ನು ರಚಿಸಿಕೊಂಡಿದ್ದಾರೆ.

ಈ ಮೂಲಕ ‘ಪತ್ನಿಯರ ವಿನಿಮಯ’ ದಂಧೆ ನಡೆಸುತ್ತಿದ್ದರು‌. ಇದೀಗ ಕೇರಳ ಪೊಲೀಸರು ಈ ದುಷ್ಕೃತ್ಯವನ್ನು ಬಯಲಿಗೆಳೆದಿದ್ದಾರೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಕಾಚಲ್​ನಲ್ಲಿ ದುಡ್ಡು ಹಾಗೂ ಸೆಕ್ಸ್​ಗಾಗಿ ತಮ್ಮ ಪತ್ನಿಯರನ್ನು ವಿನಿಮಯ ಮಾಡಿಕೊಳ್ಳಲೆಂದೇ ಈ ನೀಚರು ಟೆಲಿಗ್ರಾಂ, ಮೆಸೆಂಜರ್ ಗ್ರೂಪ್​ ಗಳನ್ನು ರಚನೆ ಮಾಡಿಕೊಂಡಿದ್ದರು. ಕೇರಳದ ಮೂರು ಜಿಲ್ಲೆಯ 1 ಸಾವಿರಕ್ಕೂ ಅಧಿಕ ಮಂದಿ ಈ ಗ್ರೂಪ್​ಗಳಲ್ಲಿ ಸದಸ್ಯರಾಗಿದ್ದರು.

ಆಘಾತಕಾರಿ ವಿಚಾರವೆಂದರೆ ಈ 'ಪತ್ನಿ ವಿನಿಮಯ' ಗ್ರೂಪಿನಲ್ಲಿ ಬಹುತೇಕ ಶ್ರೀಮಂತ ಕುಟುಂಬಸ್ಥರೇ ಇದ್ದರು ಎಂಬ ಅಂಶ ಬಯಲಾಗಿದೆ. ಹಣ ಉಳ್ಳವರು ತಮಗಿಷ್ಟ ಬಂದಾಕೆಯನ್ನು ಅದೇ ಗ್ರೂಪಿನಲ್ಲೇ ಆಯ್ಕೆ ಮಾಡುತ್ತಿದ್ದರು. ಇತ್ತ ಪತಿಯು ಹಣಕ್ಕಾಗಿ ಪರಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದುವಂತೆ ತನ್ನ ಪತ್ನಿಯನ್ನೇ ಕಳುಹಿಸುತ್ತಿದ್ದನು. ಇದೇ ಗ್ರೂಪಿನ ಸದಸ್ಯನೊಬ್ಬ ತನ್ನ ಪತ್ನಿಯನ್ನು ಮೂವರು ಗಂಡಸರ ಜತೆ ಕಳುಹಿಸಿದ್ದ ಎಂಬ ಆಘಾತಕಾರಿ ವಿಚಾರವೂ ಬಯಲಾಗಿದೆ.

ಪತ್ನಿ ವಿನಿಮಯ ದಂಧೆಯಲ್ಲಿ ಸಂತ್ರಸ್ತೆಯರ ಪತಿಯರೇ ದಲ್ಲಾಳಿಗಳಾಗಿದ್ದರು ಎಂಬ ವಿಚಾರ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಬಗ್ಗೆ ಮಹಿಳೆಯೊಬ್ಬರು ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದ್ದು, ಪತ್ನಿಯರ ವಿನಿಮಯ ಜಾಲದ ಇಂಚಿಂಚೂ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.