-->
ದೂರುದಾರನಿಗೆ ತನ್ನ ಕಾರನ್ನೇ ನೀಡಿ ಪಿಎಸ್ಐ ಎದೆಯಲ್ಲಿ ನಡುಕು ಉಂಟಾಗುವಂತೆ ಮಾಡಿದ ಎಸ್ಪಿ: ಮರುದಿನವೇ ಆರೋಪಿ ಅಂದರ್

ದೂರುದಾರನಿಗೆ ತನ್ನ ಕಾರನ್ನೇ ನೀಡಿ ಪಿಎಸ್ಐ ಎದೆಯಲ್ಲಿ ನಡುಕು ಉಂಟಾಗುವಂತೆ ಮಾಡಿದ ಎಸ್ಪಿ: ಮರುದಿನವೇ ಆರೋಪಿ ಅಂದರ್

ತುರುವೇಕೆರೆ: ಆರೋಪಿಯನ್ನು ಹಿಡಿಯಲು ದೂರುದಾರನಿಗೆ ತುಮಕೂರು ಜಿಲ್ಲಾ ಎಸ್ಪಿ ತನ್ನ ಕಾರನ್ನೇ ಕೊಟ್ಟಿರುವ ಪ್ರಕರಣ ಎಲ್ಲೆಡೆ ಚರ್ಚೆಯಾಗುತ್ತಿದ್ದು, ಇದೀಗ ಆರೋಪಿಯ ಬಂಧನವಾಗಿದೆ. ಕಾರು ವಾಪಸ್​ ಎಸ್​ಪಿ ಕಚೇರಿಗೆ ಬಂದಿದೆ. ಈ ಮೂಲಕ ಆರೋಪಿಗೆ ಸಾಥ್ ನೀಡಿರುವ ಪಿಎಸ್​ಐಗೆ ಕರ್ತವ್ಯದ ಮೂಲಕವೇ ಚಾಟಿ ಬೀಸಿದ ಎಸ್ ಪಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. 

ಕಳೆದ 3-4 ತಿಂಗಳ ಹಿಂದೆ ಆರೋಪಿಯ ಬಗ್ಗೆ ದೂರು ದಾಖಲಾಗಿದ್ದರೂ ಅಲ್ಲಿನ ಪಿಎಸ್​ಐ ಆರೋಪಿಯನ್ನು ಬಂಧಿಸಿರಲಿಲ್ಲ. ದೂರುದಾರರಿಗೆ ನಿತ್ಯ ಠಾಣೆಗೆ ಅಲೆದು ಅಲೆದು ಸಾಕಾಗಿತ್ತು. ಸರ್​ ಆರೋಪಿ ಅಲ್ಲೇ ಇದ್ದಾನೆ ಬನ್ನಿ ಅರೆಸ್ಟ್​ ಮಾಡಿ ಅಂದರೂ ‘ಆರೋಪಿಯನ್ನು ಕರೆತರಲು ಬಾಡಿಗೆ ಕಾರು ತನ್ನಿ’ ಎಂದು ಸೂಚಿಸಿದ್ದ ದಂಡಿನಶಿವರ ಠಾಣೆ ಪಿಎಸ್​ಐ ಶಿವಲಿಂಗಯ್ಯಗೆ ಎಸ್​ಪಿ ರಾಹುಲ್​ಕುಮಾರ್​ ಕೊಟ್ಟ ಶಾಕ್​ ಅಷ್ಟಿಷ್ಟಲ್ಲ. 

2021ರ ಆಗಸ್ಟ್​ 28ರಂದು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಂಡಿನಶಿವರ ಠಾಣಾ ವ್ಯಾಪ್ತಿಯ ಕೋಡಿಹಳ್ಳಿಯಲ್ಲಿ ನಡೆದಿರುವ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಾಗೇಂದ್ರಪ್ಪ ಹಾಗೂ ನೆರೆಹೊರೆಯ ಶಿವಪ್ರಕಾಶ್​ ಮತ್ತು ಆತನ ಪುತ್ರ ಚಂದನ್​ ಮಧ್ಯೆ ಜಗಳವಾಗಿತ್ತು. ಈ ವೇಳೆ ನಾಗೇಂದ್ರಪ್ಪ ಹಾಗೂ ಅವರ ಪತ್ನಿ ಶಿವಮ್ಮಗೆ ಚಂದನ ಮತ್ತು ಶಿವಪ್ರಕಾಶ್ ಹಿಗ್ಗಾಮುಗ್ಗಾ ಹಲ್ಲೆಗೈದಿದ್ದರಂತೆ. 

ಪರಿಣಾಮ ನಾಗೇಂದ್ರಪ್ಪ ಹಾಗೂ ಶಿವಮ್ಮನಿಗೆ ಗಂಭೀರ ಗಾಯಗಳಾಗಿ ತುರುವೇಕೆರೆ ಆಸ್ಪತ್ರೆ ಹಾಗೂ ತುಮಕೂರಿನ ಖಾಸಗಿ ಆಸ್ಪತ್ರೆ ಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರು ಇದು ಮಾರಣಾಂತಿಕ ಹಲ್ಲೆ ಎಂದು ವರದಿ ನೀಡಿದ್ದಾರೆ. ಇದನ್ನು ಪಡೆದಿರುವ ನಾಗೇಂದ್ರಪ್ಪ ದಂಡಿನಶಿವರ ಪೊಲೀಸ್ ಠಾಣೆಗೆ 307 ಕೊಲೆ ಯತ್ನ ಕೇಸ್ ನೀಡಿದ್ದರು. ಆದರೆ ಆರೋಪಿಗಳನ್ನು ಬಂಧಿಸದೆ ಪಿಎಸ್​ಐ ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪ ಕೇಳಿಬಂದಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ್​ಗೆ ಜಾಮೀನು ದೊರೆತಿದ್ದು, ಚಂದನ್​ ತಲೆಮರೆಸಿಕೊಂಡಿದ್ದ. ಹೀಗಾಗಿ ಆರೋಪಿ ಚಂದನ್​ನನ್ನು ಬಂಧಿಸುವಂತೆ ದೂರುದಾರ ನಾಗೇಂದ್ರಪ್ಪ ಠಾಣೆಗೆ ಬಂದು ಪಿಎಸ್​ಐ ಬಳಿ ಮನವಿ ಮಾಡಿಕೊಂಡಾಗ, ಆರೋಪಿಯನ್ನು ಬಂಧಿಸೋಣ. ಅದಕ್ಕಾಗಿ ನೀನೊಂದು ಬಾಡಿಗೆ ವಾಹನ ಮಾಡಿಕೊಂಡು ಬಾ ಎಂದು ಪಿಎಸ್​ಐ ಶಿವಲಿಂಗಯ್ಯ ಹೇಳಿದ್ದಾರೆ ಎನ್ನಲಾಗಿದೆ. ತನಿಖೆಗೆ ಆಗ್ರಹಿಸಿ ಪದೇಪದೆ ಠಾಣೆಗೆ ಭೇಟಿ ನೀಡುತ್ತಿದ್ದ ನಾಗೇಂದ್ರಪ್ಪ ಪಿಎಸ್​ಐ ವರ್ತನೆಯಿಂದ ರೋಸಿ ಹೋಗಿರುವ ಗುರುವಾರ ತುಮಕೂರಿಗೆ ಬಂದು ಜಿಲ್ಲಾ ಪೊಲೀಸ್​ ಅಧೀಕ್ಷಕ ರಾಹುಲ್​ಕುಮಾರ್​ ಅವರನ್ನು ಭೇಟಿಯಾಗಿ ಕಣ್ಣೀರಿಟ್ಟಿದ್ದರು. 

ಪಿಎಸ್​ಐ ವರ್ತನೆಯಿಂದ ಕೆಂಡಾಮಂಡಲರಾದ ಎಸ್​ಪಿ ರಾಹುಲ್ ಕುಮಾರ್, ಸ್ವತಃ ತಮ್ಮ ಕಾರಿನಲ್ಲೇ ನಾಗೇಂದ್ರಪ್ಪ ಮತ್ತು ಅವರ ಕಡೆಯವರನ್ನು ಕುಳಿತುಕೊಳ್ಳುವಂತೆ ಹೇಳಿ ಎಂದಿದ್ದಾರೆ. ತಮ್ಮ ಕಾರು ಚಾಲಕನನ್ನು ಕರೆದು ಇವರನ್ನು ಸೀದಾ ದಂಡಿನಶಿವರ ಪೊಲೀಸ್ ಠಾಣೆಗೆ ಬಿಟ್ಟು ಬಾ ಎಂದಿದ್ದಾರೆ. ಕಾರು ಬಂದಿದೆ ಆರೋಪಿಯನ್ನು ಬಂಧಿಸುವಂತೆ ಪಿಎಸ್​ಐ ಅವರನ್ನು ಕೇಳಿ ಎಂದು ನಾಗೇಂದ್ರಪ್ಪಗೆ ಹೇಳಿ ಕಳುಹಿಸಿದ್ದರು. 

ಪೊಲೀಸ್​ ಠಾಣೆಯ ಮುಂದೆ ಸಾಹೇಬರ ಕಾರು ಕಂಡೊಡನೆ ದಂಗಾದ ದಂಡಿನಶಿವರ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿ ನಿಂತಲ್ಲಿಯೇ ಬೆವತು ಹೋಗಿದ್ದಾರೆ. ಅಷ್ಟೇ ಅಲ್ಲ, ದಂಡಿನಶಿವರ ಪಿಎಸ್ಐ ಶಿವಲಿಂಗಯ್ಯಗೆ ದೂರವಾಣಿ ಕರೆ ಮಾಡಿದ ಎಸ್​ಪಿ ರಾಹುಲ್, ಆರೋಪಿ ಎಲ್ಲೇ ಇದ್ದರೂ ನಾಳೆ ಬೆಳಗಾಗುವಷ್ಟರಲ್ಲಿ ಬಂಧಿಸಬೇಕು ಎಂದು ಖಡಕ್​ ವಾರ್ನಿಂಗ್​ ಮಾಡಿದ್ದರು. ಇದಾದ ಮರುದಿನವೇ ಆರೋಪಿಯನ್ನು ಬಂಧಿಸಲಾಗಿದೆ. ಎಸ್​ಪಿ ಅವರ ಕರ್ತವ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.

Ads on article

Advertise in articles 1

advertising articles 2

Advertise under the article