ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ: ಕೊಲೆಗೆ ಕಾರಣ ಏನು ಗೊತ್ತೇ?

ಬೆಂಗಳೂರು: ಅನೈತಿಕ ಸಂಬಂಧ ಹೊಂದಿದ್ದಾಳೆಂದು ಪತ್ನಿಯನ್ನು ಪತಿಯೇ ಉಸಿರುಟ್ಟಿಸಿ ಕೊಂದಿರುವ  ಘಟನೆ ಬನ್ನೇರುಘಟ್ಟ ಸಮೀಪದ ಕರಿಯಪನಹಳ್ಳಿಯಲ್ಲಿ ನಡೆದಿದೆ. 

ಬನ್ನೇರುಘಟ್ಟ ಸಮೀಪದ ಕರಿಯಪನಹಳ್ಳಿ ನಿವಾಸಿ ಭಾರತಿ(32) ಕೊಲೆಯಾದ ದುರ್ದೈವಿ. ಪತಿ ರಘು(38) ಕೊಲೆಗೈದಾತ. 

ಕೊಲೆಗೈದಿರುವ ಆರೋಪಿ ಪತಿ ರಘು ಬನ್ನೇರುಘಟ್ಟದಲ್ಲಿ ಆಟೋ ಚಾಲಕನಾಗಿದ್ದ. ಪತ್ನಿ ಭಾರತಿ ಮೇಸ್ತ್ರಿಯೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಪತಿ ಆರೋಪಿಸಿದ್ದಾನೆ. ಇದೇ ವಿಚಾರಕ್ಕೆ ಶನಿವಾರ ಸಂಜೆ ಮನೆಯಲ್ಲಿ ದಂಪತಿ ಮಧ್ಯೆ ಜಗಳ ನಡೆದಿತ್ತು. ಜಗಳ ತಾರಕಕ್ಕೇರಿದ್ದು, ಕೋಪಗೊಂಡ ರಘು ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದ. 

ಕೊಲೆಗೈದ ಬಳಿಕ ಬನ್ನೇರುಘಟ್ಟ ಠಾಣೆಗೆ ಆಗಮಿಸಿರುವ ಆರೋಪಿ ನಡೆದ ಎಲ್ಲ ಘಟನೆಯನ್ನು ಪೊಲೀಸರಿಗೆ ತಿಳಿಸಿ ಶರಣಾಗಿದ್ದಾನೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಮೃತದೇಹವನ್ನು ಮಹಜರು ಮಾಡಲು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.