
ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ಯುವತಿಯ ಕತ್ತು ಸೀಳಿದ ಚೀನಾದ ಗಾಳಿಪಟ: ಮೂವರ ವಿರುದ್ಧ ಪ್ರಕರಣ ದಾಖಲು
1/17/2022 03:14:00 AM
ಉಜ್ಜಯಿನಿ (ಮಧ್ಯಪ್ರದೇಶ): ಮಕರ ಸಂಕ್ರಾಂತಿ ಹಬ್ಬದ ದಿನದಂದೇ ಹಾರಿಸಿರು ಗಾಳಿಪಟವು ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ಯುವತಿಯೋರ್ವಳ ಕತ್ತಿಗೆ ಉರುಳಾದ ಘಟನೆ ಉಜ್ಜಯಿನಿಯಲ್ಲಿ ನಡೆದಿದೆ.
ಶನಿವಾರ ಸಂಜೆ ಉಜ್ಜಯಿನಿಯ ಮಾಧವ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಝೀರೋ ಪಾಯಿಂಟ್ ಸೇತುವೆ ಬಳಿ ಯುವತಿ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದಳು. ಈ ಸಂದರ್ಭ ಚೀನಾ ನಿರ್ಮಿತ ಗಾಳಿಪಟದ ದಾರವು ಕಡಿದು ಆಕೆಯ ಗಂಟಲನ್ನು ಸೀಳಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಾಳೆ. ಈ ಚೀನಾ ನಿರ್ಮಿತ ಗಾಳಿಪಟದ ದಾರಕ್ಕೆ ಗಾಜಿನ ಪುಡಿ ಲೇಪಿತವಾಗಿದೆ. ಜೀವಕ್ಕೆ ಅಪಾಯ ತಂದೊಡ್ಡುವ ಈ ಗಾಳಿಪಟ ಮಾರಾಟ ಭಾರತದಲ್ಲಿ ಕಾನೂನುಬಾಹಿರವಾಗಿದೆ.
ಯುವತಿಯ ಮೃತಪಟ್ಟ ಬಳಿಕ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಚೀನಾ ಗಾಳಿಪಟವನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲೆಗಳಿಗೆ ಸೂಚನೆ ನೀಡಿದ್ದರು. ಅದರಂತೆ ಚೀನಾ ಗಾಳಿಪಟವನ್ನು ಮಾರಾಟ ಮಾಡಲು ಬಳಸುತ್ತಿದ್ದ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಅಬ್ದುಲ್ ಜಬ್ಬಾರ್, ರಿತಿಕ್ ಜಾಧವ್ ಮತ್ತು ವಿಜಯ್ ಭಾವಸರ್ ಎಂಬ ಮೂವರು ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.