ಲೈಂಗಿಕ ಕಿರುಕುಳ ಪ್ರಕರಣದ ಆರೋಪ: ತನಿಖಾಧಿಕಾರಿಗಳಿಗೆ ಹಳೆಯ ಫೋನ್ ಕೊಡಲು ನಟ ದಿಲೀಪ್ ನಿರಾಕರಣೆ

ತಿರುವನಂತಪುರಂ: ಖ್ಯಾತ ನಟಿಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಯಾಗಿದ್ದ ಮಲಯಾಳಂ ನಟ ದಿಲೀಪ್ ವಿಚಾರಣೆ ವೇಳೆ ತಮ್ಮ ಹಳೆಯ ಮೊಬೈಲ್​ ಫೋನ್​ ಕೊಡಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಅದೇ ರೀತಿ ನಿರ್ದೇಶಕ ಬಾಲಚಂದ್ರ ಕುಮಾರ್​ ಹಾಗೂ ತನಿಖಾಧಿಕಾರಿಗಳ ನಡುವಿನ ಪಿತೂರಿ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯವನ್ನು ದಿಲೀಪ್​ ಕೋರಿದ್ದಾರೆ. 

ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್​ ಅಧಿಕಾರಿಗಳ ಕೊಲೆಗೆ ಸಂಚು ರೂಪಿಸಿರುವ ಅರೋಪವೂ ನಟ ದಿಲೀಪ್​ ಮೇಲಿದೆ. ಈ ಬಗ್ಗೆ ಹೊಸದಾಗಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಆರೋಪಿ ದಿಲೀಪ್​ರನ್ನು ವಿಚಾರಣೆ ನಡೆಸುತ್ತಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲಾ ಆರೋಪಿಗಳು ತಮ್ಮ ಹಳೆಯ ಫೋನ್​ಗಳನ್ನು ಬದಲಾಯಿಸಿದ್ದು, ಹೊಸ ಫೋನ್​ಗಳನ್ನು ಖರೀದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸಾಕ್ಷಿಗಳನ್ನು ಮರೆಮಾಚಿರುವ ಸಂಶಯದ ಮೇರೆಗೆ ಹಳೆಯ ಫೋನ್​ಗಳನ್ನು ಸಲ್ಲಿಸುವಂತೆ ತನಿಖಾಧಿಕಾರಿಗಳು ಆರೋಪಿಗಳನ್ನು ಕೇಳಿದ್ದರು. ಆದರೆ, ದಿಲೀಪ್​ ಫೋನ್​ ಕೊಡಲು ನಿರಾಕರಿಸಿದ್ದಾರೆ. ಅಲ್ಲದೆ ಯಾವುದೇ ದಾಖಲಾತಿಗಳನ್ನು ಸಲ್ಲಿಸುವಂತೆ ಆರೋಪಿಗಳ ಬಳಿ ಕೇಳುವಂತಿಲ್ಲ ಎಂದು ಸುಪ್ರೀಂಕೋರ್ಟ್​ ನೀಡಿರುವ ತೀರ್ಪನ್ನು ದಿಲೀಪ್​ ಉಲ್ಲೇಖಿಸಿದ್ದಾರೆಂದು ತಿಳಿದುಬಂದಿದೆ. 

ಒಂದು ವೇಳೆ ತನಿಖಾಧಿಕಾರಿಗಳಿಗೆ ಹಳೆಯ ಫೋನ್​ ಅನ್ನು ನೀಡಿದಲ್ಲಿ ಅದರಲ್ಲಿರುವ ಕೆಲವೊಂದು ಅಂಶಗಳನ್ನು ಇಟ್ಟುಕೊಂಡು ಸುಳ್ಳು ಸುದ್ದಿಯನ್ನು ಸೃಷ್ಟಿ ಮಾಡಲಿದ್ದಾರೆ. ಹೀಗಾಗಿ ತಾನು ಹಳೆಯ ಫೋನ್ ನೀಡುವುದಿಲ್ಲ ಎಂದು ದಿಲೀಪ್​ ಸಮಜಾಯಿಷಿ ನೀಡಿದ್ದಾರೆ. ಆದರೆ ವಿಧಿವಿಜ್ಞಾನ ಪರೀಕ್ಷೆಗಾಗಿ ಹೊಸ ಫೋನ್​ನನ್ನು ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ. ಆದರೆ, ತನಿಖಾಧಿಕಾರಿಗಳ ಪ್ರಕಾರ ಹಳೆಯ ಫೋನ್​ನಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ತನಿಖಾಧಿಕಾರಿಗಳ ಕೊಲೆಗೆ ಸಂಚು ರೂಪಿಸಿರುವ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳಿವೆ ಎಂದು ಹೇಳಲಾಗಿದೆ. 

ನಿರ್ದೇಶಕ ಬಾಲಚಂದ್ರಕುಮಾರ್ ಹೇಳಿರುವ ಅವಧಿಯಲ್ಲಿ ತಾನು ಬಳಸಿರುವ ಮೊಬೈಲ್ ಫೋನ್ ಈಗಾಗಲೇ ಪೊಲೀಸರ ಬಳಿ ಇದೆ. ಅಲ್ಲದೆ ತನಿಖಾಧಿಕಾರಿಗಳನ್ನು ಮೂರ್ಖರನ್ನಾಗಿಸಿರುವ ಆರೋಪದಿಂದ ನಾನು ಆಘಾತಗೊಂಡಿದ್ದೇನೆ ಎಂದು ದಿಲೀಪ್ ಹೇಳಿದ್ದಾರೆ. 

ತನಿಖಾಧಿಕಾರಿ ಬೈಜು ಪೌಲೋಸ್ ಹಾಗೂ ಬಾಲಚಂದ್ರಕುಮಾರ್ ತನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಅವರಿಬ್ಬರ ಫೋನ್‌ಗಳನ್ನು ಪರಿಶೀಲಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ. 2016-17ರ ಅವಧಿಯಲ್ಲಿ ಬಾಲಚಂದ್ರಕುಮಾರ್ ಬಳಸಿರುವ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಬೇಕು ಎಂದು ದಿಲೀಪ್ ಕೇಳಿಕೊಂಡಿದ್ದಾರೆ.