ರೈಲ್ವೆ ಹಳಿ ಮೇಲೆ ನಿಂತು ಸೆಲ್ಫಿ ತೆಗೆಯಲೆತ್ನಿಸಿದ ಬಾಲಕ ದುರಂತ ಸಾವು!

ದಾವಣಗೆರೆ: ಸೆಲ್ಫಿ ಹುಚ್ಚಿನಿಂದ ಎಷ್ಟೋ ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆದರೂ ಸೆಲ್ಫಿ, ಫೋಟೋಗಳ ವ್ಯಾಮೋಹವನ್ನು ಬಿಟ್ಟುಬಿಡಲಾಗದೆ ಜನರು ಹೊಸಹೊಸ ರೀತಿಯಲ್ಲಿ ಪೋಸ್‌ ಕೊಡಲು ಹೋಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಅಂಥದ್ದೇ ಒಂದು ದುರ್ಘಟನೆ ದಾವಣಗೆರೆಯಲ್ಲಿ ನಡೆದಿದೆ. 

ದಾವಣಗೆರೆಯ ಡಿಸಿಎಂ ಟೌನ್ ಶಿಪ್ ಬಳಿಯಿರುವ ರೈಲ್ವೆ ಸ್ಟೇಷನ್​​ ರೈಲ್ವೆ ಹಳಿ ಮೇಲೆ ನಿಂತು ಫೋಟೋ ಕ್ಲಿಕ್ಕಿಸಲು ಹೋಗಿ 16 ವರ್ಷದ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಸಚಿನ್‌ ಎಂಬ ಬಾಲಕ ಮೃತಪಟ್ಟವನು. ಸಚಿನ್​ ಸ್ನೇಹಿತರೊಂದಿಗೆ ಫೋಟೋ ತೆಗೆಸಿಕೊಳ್ಳಲು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಾನೆ. 

ಅಲ್ಲಿ ಎರಡು ಹಳಿಗಳಿದ್ದು, ಒಂದು ಹಳಿಯ ಮೇಲೆ ಸಚಿನ್ ನಿಂತಿದ್ದ. ಇನ್ನೊಂದು ಹಳಿಯ ಮೇಲೆ ರೈಲು ಬರುವಾಗ ಬ್ಯಾಕ್‌ಗ್ರೌಂಡ್‌ ಚೆನ್ನಾಗಿರುತ್ತೆ ಎನ್ನುವ ಕಾರಣಕ್ಕೆ ರೈಲು ಬರುವುದನ್ನು ಕಾಯುತ್ತಿದ್ದರು.  ರೈಲು ಬರುವ ಶಬ್ದ ಕೇಳುತ್ತಿದ್ದಂತೆಯೇ ಫೋಟೋಗೆ ಈತ ಪೋಸ್‌ ಕೊಟ್ಟಿದ್ದಾನೆ. ಆದರೆ ಆತನ ಅದೃಷ್ಟ ಕೆಟ್ಟಿತ್ತು. ಅವನು ಯಾವ ಹಳಿಯ ಮೇಲೆ ನಿಂತಿದ್ದನೋ ಅದೇ ಹಳಿಯ ಮೇಲೆ ರೈಲು ಬಂದು ಸಚಿನ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. 

ಸ್ಥಳಕ್ಕೆ ರೈಲ್ವೆ ಮತ್ತು ಕೆಟಿಜೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.