ಹುಟ್ಟಿದ ಹಬ್ಬದ ದಿನವೇ ಪ್ರಿಯತಮೆ ಭಾವನಿಂದಲೇ ಚೂರಿ ಇರಿತಕ್ಕೊಳಗಾದ ಪ್ರಿಯಕರ!

ಬೆಂಗಳೂರು: ತನ್ನ ಹುಟ್ಟಿದ ಹಬ್ಬದ ದಿನ ಖುಷಿಯಿಂದ ಪ್ರಿಯತಮೆಯನ್ನು ನೋಡಲು ಹೋಗಿದ್ದ ಪ್ರಿಯಕರ ಚೂರಿ ಇರಿತಕ್ಕೊಳಗಾಗಿರುವ ಘಟನೆ ಬೆಂಗಳೂರಿನ ಹಳೇ ಬಯ್ಯಪ್ಪನಹಳ್ಳಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಯುವತಿಯೊಬ್ಬಳ ಪ್ರೀತಿಯ ಬಲೆಗೆ ಬಿದ್ದಿದ್ದ ರಾಕೇಶ್ ಅಲಿಯಾಸ್ ರಿಷಿ ಎಂಬಾತ ತನ್ನ ಜನ್ಮದಿನವಾದ ಜ. 15ರಂದು ಪ್ರೇಯಸಿಯಿಂದ ಬರ್ತ್​ಡೇ ವಿಷ್ ಮಾಡಿಸಿಕೊಳ್ಳಬೇಕೆಂದು ಹೋಗಿದ್ದ. ಈ ಸಂದರ್ಭ ಆಕೆಯ ಭಾವ ಎದುರಾಗಿದ್ದಾನೆ. ನಾದಿನಿಯನ್ನು ನೋಡಲು ಬಂದ ಆಕೆಯ ಪ್ರಿಯಕರನನ್ನು ಕಂಡು ಕೋಪಗೊಂಡ ಅಭಾವ ಸುನಿಲ್, ರಾಕೇಶ್​ಗೆ ಚಾಕುವಿನಿಂದ ಇರಿದಿದ್ದಾನೆ.

ಗಾಯಗೊಂಡು ಅಲ್ಲಿಂದ ಪಾರಾದ ರಾಕೇಶ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಪ್ರಕರಣ ನಡೆದ ಬಳಿಕ ಸುನಿಲ್ ತಲೆಮರೆಸಿಕೊಂಡಿದ್ದ. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಬಯ್ಯಪ್ಪನಹಳ್ಳಿ ಪೊಲೀಸರು ಸುನಿಲ್​ನನ್ನು ಪತ್ತೆ ಮಾಡಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.