-->
ದೆಹಲಿಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: 9 ಮಂದಿ ಅರೆಸ್ಟ್

ದೆಹಲಿಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: 9 ಮಂದಿ ಅರೆಸ್ಟ್

ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯ ವಿವೇಕ್​ ವಿಹಾರದಲ್ಲಿ 20 ವರ್ಷದ ಯುವತಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 9 ಮಂದಿ ಆರೋಪಿಗಳನ್ನು  ಬಂಧಿಸಲಾಗಿದೆ‌. ಬಂಧಿತರಲ್ಲಿ 7 ಮಂದಿ ಮಹಿಳೆಯರಾಗಿದ್ದು, ಇಬ್ಬರು ಅಪ್ರಾಪ್ತರಾಗಿದ್ದಾರೆ ಎಂದು ಪೂರ್ವ ದೆಹಲಿಯ ಶಹದಾರಾ ಠಾಣಾ ಪೊಲೀಸರು ತಿಳಿಸಿದ್ದಾರೆ.

ಗಣರಾಜ್ಯೋತ್ಸವ ದಿನದಂದೇ ವಿವೇಕ್​ ವಿಹಾರ ಏರಿಯಾದಲ್ಲಿ 20 ವರ್ಷ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಅಲ್ಲದೆ ಆಕೆಯ ಮೇಲೆ ಹಲ್ಲೆಗೈದು ಚಪ್ಪಲಿ ಹಾಕಿ, ತಲೆ ಬೋಳಿಸಿ ಮುಖಕ್ಕೆ ಮಸಿ ಬಳಿದು ಬೀದಿಯಲ್ಲಿ ಮೆರವಣಿಗೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. 

ಈ ಘಟನೆ ನಡೆದಿರುವ ಬೆನ್ನಲ್ಲೇ ದೆಹಲಿಯ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲಿವಲ್​, ಪ್ರಕರಣದ ಬಗ್ಗೆ ಏನು ಕ್ರಮಕೈಗೊಳ್ಳಲಾಗಿದೆಯೋ ಅದರ ಸಮಗ್ರ ವರದಿಯನ್ನು 72 ಗಂಟೆಯೊಳಗೆ ಸಲ್ಲಿಸುವಂತೆ ದೆಹಲಿ ಪೊಲೀಸರನ್ನು ಕೇಳಿದ್ದರು. ಇದಾದ ಒಂದು ದಿನದಲ್ಲೇ ದೆಹಲಿ ಪೊಲೀಸರು 9 ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ ಪ್ರಕರಣದ ಆರೋಪಿಗಳ ವಿರುದ್ಧ ಅಕ್ರಮ ಮದ್ಯ ಮತ್ತು ಮಾದಕವಸ್ತು ವ್ಯಾಪಾರಗಳ ಕುರಿತು ಈ ಹಿಂದೆ ದಾಖಲಾಗಿದ್ದ ದೂರಿನ ಬಗ್ಗೆಯೂ ಮಹಿಳಾ ಆಯೋಗ ವಿವರಣೆಯನ್ನು ಕೇಳಿದೆ. 

ಸಂತ್ರಸ್ತೆಯ ಮೆರವಣಿಗೆಯ ಮೊಬೈಲ್​ ವೀಡಿಯೋ ಮತ್ತು ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಸುಮಾರು 10 ರಿಂದ 15 ಮಂದಿಯನ್ನು ಗುರುತಿಸಲಾಗಿದೆ. ಅದರಲ್ಲಿ 9 ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರ ಪತ್ತೆಗಾಗಿ ಐದು ತಂಡಗಳು ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಈ ರೀತಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎನ್ನಲಾಗಿದೆ.

ಓರ್ವ ಬಾಲಕ ಈ ಯುವತಿಯನ್ನು ಹಿಂಬಾಲಿಸುತ್ತಿದ್ದ. ಆದರೆ ಆತ ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದ. ಆ ಬಾಲಕನ ಆತ್ಮಹತ್ಯೆಗೆ ಈಕೆಯೇ ಕಾರಣ ಎಂಬ ಕಾರಣಕ್ಕೆ ಕುಟುಂಬದವರು ಈ ಹಲ್ಲೆ ನಡೆಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಸಂತ್ರಸ್ತೆ ವಿವಾಹಿತೆಯಾಗಿದ್ದು, ಒಂದು ಮಗುವಿನ ತಾಯಿಯಾಗಿದ್ದಾರೆ. ಸದ್ಯ ಪ್ರಕರಣದ ಸತ್ಯಾಸತ್ಯತೆ ಬಹಿರಂಗಗೊಳ್ಳಬೇಕಿದೆ.

Ads on article

Advertise in articles 1

advertising articles 2

Advertise under the article