ಮತ್ತೊಂದು ಮದುವೆಯಾಗಲು‌ ಅಣಿಯಾಗಿ ಮ್ಯಾಟ್ರಿಮೊನಿಯಲ್ಲಿ ನೋಂದಾಯಿಸಿದ್ದ 80 ವರ್ಷದ ವೃದ್ಧನನ್ನು ಬರ್ಬರವಾಗಿ ಹತ್ಯೆ ಮಾಡಿದ ಪುತ್ರ!

ಮುಂಬೈ: ಮತ್ತೊಂದು ವಿವಾಹವಾಗಲು ಮ್ಯಾಟ್ರಿಮೋನಿ ಸೈಟ್‌ನಲ್ಲಿ ನೋಂದಾಯಿಸಿಕೊಂಡಿದ್ದ 80 ವರ್ಷದ ವೃದ್ಧನನ್ನು ಪುತ್ರನೇ ಬರ್ಬರವಾಗಿ ಹತ್ಯೆ ಮಾಡಿರುವ ದುರ್ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. 

ವೈಶಂಪಾಯನಲಿ ಪ್ರದೇಶದ ಹೌಸಿಂಗ್ ಸೊಸೈಟಿ ಶಂಕರ್ ರಾಂಭೌ ಬೋರ್ಹಾಡೆ ಎಂಬವರು ಪುತ್ರ ಶೇಖರ‌ ಎಂಬಾತನಿಂದಲೇ ಹತ್ಯೆಯಾದವರು.

ಕೆಲ ತಿಂಗಳ ಹಿಂದೆ ಶಂಕರ್‌ ಪತ್ನಿ ಮೃತಪಟ್ಟಿದ್ದರು. ಈ ಇಳಿ ವಯಸ್ಸಿನಲ್ಲಿ ತನಗೆ ಆಸರೆಯಾಗಿ ಪತ್ನಿ ಇರಬೇಕೆಂದು ಶಂಕರ್‌ ಅಂದುಕೊಂಡಿದ್ದರು. 80 ವಯಸ್ಸಿನಲ್ಲಿ ನಿನಗೆ ಮತ್ತೊಂದು ಮದುವಯೇಕೆಂದು ಅಪ್ಪನ ಮದುವೆಗೆ ಮಗ ವಿರೋಧ ವ್ಯಕ್ತಪಡಿಸಿದ್ದ.

ಪುತ್ರನ ವಿರೋಧದ ನಡುವೆಯೂ ಮ್ಯಾಟ್ರಿಮೋನಿ ಸೈಟ್‌ನಲ್ಲಿ ಶಂಕರ್ ಹೆಸರು ನೋಂದಾಯಿಸಿಕೊಂಡಿದ್ದರು. ಇದರಿಂದ ಮಗ ಶೇಖರ್‌ ವಿಪರೀತ ಕೋಪಗೊಂಡಿದ್ದರು. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ತಾರಕಕ್ಕೇರಿದೆ. ಪರಿಣಾಮ ಸಿಟ್ಟಿನ ಭರದಲ್ಲಿ ಪುತ್ರ ಚಾಕುವಿನಿಂದ ತನ್ನ ತಂದೆಯ ಕತ್ತನ್ನು ಸೀಳಿ ಕೊಯ್ದಿದ್ದಾನೆ. ಬಳಿಕ ಸಾವು ಬದುಕಿನ ನಡುವೆ ನರಳುತ್ತಿದ್ದ ತಂದೆಯ ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ.

ಇಷ್ಟು ಮಾಡಿದ ಪುತ್ರ ಶೇಖರ್ ಪೊಲೀಸ್ ಠಾಣೆಗೆ ತೆರಳಿ ತನ್ನ ತಪ್ಪನ್ನು ಒಪ್ಪಿಕೊಂಡು ಶರಣಾಗಿದ್ದಾನೆ. ಶೇಖರ್‌ನನ್ನು ಪೊಲೀಸರು ಬಂಧಿಸಿದ್ದಾರೆ.