ಪಂಜಾಬ್ ಚುನಾವಣೆ: ರಾಜಕೀಯ ಕಣಕ್ಕೆ ಭಜ್ಜಿ, ಯುವಿ... ಅವರ ಪಕ್ಷ ಯಾವುದು ಗೊತ್ತೇ...?
ಪಂಜಾಬ್ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿದ್ದು, ಇಬ್ಬರು ಸ್ಟಾರ್ ಕ್ರಿಕೆಟಿಗರು ರಾಜಕೀಯ ಕಣಕ್ಕೆ ಧುಮುಕುತ್ತಿದ್ದಾರೆ.
ಎಡಗೈ ಬ್ಯಾಟ್ಸ್‌ಮನ್, ಆಲ್‌ರೌಂಡರ್ ಯುವರಾಜ್ ಸಿಂಗ್ ಮತ್ತು ಅನುಭವಿ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್ ರಾಜಕೀಯ ರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.
ಈ ಇಬ್ಬರು ಸ್ಟಾರ್ ಕ್ರಿಕೆಟರ್‌ಗಳು ಕಮಲ ಪಾಳಯ ಸೇರಲಿದ್ದಾರೆ ಎಂಬುದನ್ನು ಹಿರಿಯ ಬಿಜೆಪಿ ನಾಯಕರೊಬ್ಬರು ಖಚಿತಪಡಿಸಿದ್ದಾರೆ. ಈಗಾಗಲೇ ಪಕ್ಷದ ನಾಯಕರೊಂದಿಗೆ ಇಬ್ಬರು ಸಂಪರ್ಕದಲ್ಲಿದ್ದು, ಇನ್ನಷ್ಟು ತಾರೆಗಳು ಪಕ್ಷದ ತೆಕ್ಕೆಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ.
ಪಂಜಾಬ್‌ನಲ್ಲಿ ರಾಜಕೀಯ ಧ್ರವೀಕರಣ ಆರಂಭವಾಗಿದ್ದು, ಕಾಂಗ್ರೆಸ್ ಒಡೆದ ಮನೆಯಾಗಿದೆ. ಕಾಂಗ್ರೆಸ್ ತೊರೆದು ತಮ್ಮದೇ ಪಕ್ಷ ರಚಿಸಿರುವ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೊಸ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾಗಲಿದ್ದಾರೆ.
ಈ ಹೊಸ ಪಕ್ಷದೊಂದಿಗೆ ಸ್ಥಾನ ಹೊಂದಾಣಿಕೆಯ ಸಾಧ್ಯತೆಯನ್ನು ಬಿಜೆಪಿ ಎದುರುನೋಡುತ್ತಿದ್ದು, ಸುಖದೇವ್ ಸಿಂಗ್ ದಿಂಡ್ಸ ಅವರ ಪಕ್ಷದೊಂದಿಗೂ ರಾಜಕೀಯ ಮೈತ್ರಿ ನಡೆಸಲು ಪ್ರಯತ್ನ ನಡೆಸಿದೆ.
117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ 2017ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದಿತ್ತು. 20 ಸ್ಥಾನ ಗೆದ್ದಿರುವ ಆಮ್ ಆದ್ಮಿ ಪಕ್ಷ ಪ್ರಧಾನ ಪ್ರತಿಪಕ್ಷವಾಗಿ ಹೊರಹೊಮ್ಮಿತ್ತು. ಶಿರೋಮಣಿ ಅಕಾಲಿ ದಳ 15 ಮತ್ತು ಆಗಿನ ಮಿತ್ರ ಪಕ್ಷ ಬಿಜೆಪಿ ಕೇವಲ ಮೂರು ಸ್ಥಾನ ಪಡೆದಿತ್ತು.
