ಮ್ಯೂನಿಚ್‌ನಲ್ಲಿ ಎರಡನೇ ಮಹಾಯುದ್ಧ ವೇಳೆಯ ಬಾಂಬ್​ ಸ್ಫೋಟ: ಮೂವರಿಗೆ ಗಾಯ

ಬರ್ಲಿನ್: ಇಲ್ಲಿನ ಮ್ಯೂನಿಚ್‌ನ ಜನನಿಬಿಡ ಪ್ರದೇಶದಲ್ಲಿರುವ ರೈಲು ಹಳಿಯ ಪಕ್ಕದ ನಿರ್ಮಾಣ ಹಂತದ ಕಟ್ಟಡದ ಸ್ಥಳದಲ್ಲಿ ಎರಡನೇ ಮಹಾಯುದ್ಧದ ಬಾಂಬ್ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದು,‌ ಅವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ಜರ್ಮನ್ ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಡೊನ್ನರ್ಸ್‌ ಬರ್ಗರ್ ಬ್ರೂಕೆ ನಿಲ್ದಾಣದ ಬಳಿಯಿರುವ ಸೈಟ್​​ ವೊಂದರಲ್ಲಿ ಈ ಬಾಂಬ್ ಸ್ಫೋಟಗೊಂಡಿದೆ. ಸ್ಪೋಟದ ಬಳಿಕ ಆ ಪ್ರದೇಶದಲ್ಲಿ ದಟ್ಟ ಹೊಗೆ ಆವೃತಗೊಂಡಿದೆ. ಜರ್ಮನಿಯ ರಾಷ್ಟ್ರೀಯ ರೈಲ್ವೆಯಿಂದ ನಡೆಸಲ್ಪಡುವ ನಿರ್ಮಾಣ ಹಂತದಲ್ಲಿರುವ ಪ್ರದೇಶವು ಮ್ಯೂನಿಚ್‌ನ ಕೇಂದ್ರ ನಿಲ್ದಾಣದ ಸಮೀಪದಲ್ಲಿದೆ. ಘಟನೆಯ ಹಿನ್ನೆಲೆಯಲ್ಲಿ ಜರ್ಮನಿಗೆ ತೆರಳುವ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ. 

2ನೇ ಮಹಾಯುದ್ಧ ಸಂಭವಿಸಿ ಸುಮಾರು 76 ವರ್ಷಗಳು ಕಳೆದರೂ ಇನ್ನೂ ಸ್ಫೋಟಗೊಳ್ಳದ ಬಾಂಬ್​ಗಳು ಜರ್ಮನಿಯಲ್ಲಿ ಪತ್ತೆಯಾಗುತ್ತಿದೆ. ಕಾಮಗಾರಿ ನಡೆಯುತ್ತಿರುವ ಸಂದರ್ಭ ಕೆಲಸಗಳು ನಡೆಯುವ ಸ್ಥಳಗಳಲ್ಲಿ ಈ ಸ್ಪೋಟಗಳು ನಡೆಯುತ್ತಿರುತ್ತವೆ. 

ಸ್ಫೋಟಗೊಳ್ಳದ ಬಾಂಬ್​ಗಳು ಪತ್ತೆಯಾಗುತ್ತಿರುವ ಬೆನ್ನಲ್ಲೆ ಸೆಂಟ್ರಲ್ ಮ್ಯೂನಿಚ್‌ನಲ್ಲಿರುವ ಸೈಟ್‌ಗಳನ್ನು ಎಚ್ಚರಿಕೆಯಿಂದ ಸ್ಕ್ಯಾನ್ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.