
ವಧು ಮದುವೆ ಮಂಟಪಕ್ಕೆ ಬಂದು ಎಷ್ಟು ಕಾದರೂ ವರ ನಾಪತ್ತೆ: ಭಾವೀ ಪತಿ ಮನೆ ಮುಂಭಾಗ ಯುವತಿ ಧರಣಿ
Wednesday, November 24, 2021
ಬ್ರಹ್ಮನಗರ (ಒಡಿಶಾ): ಭಾವಿ ಪತಿ ಮದುವೆಗೆ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಆತನ ಮನೆಯ ಮುಂಭಾಗವೇ ವಧು ಧರಣಿ ಕುಳಿತಿರುವ ಘಟನೆ ಒಡಿಶಾದ ಬ್ರಹ್ಮನಗರದಲ್ಲಿ ನಡೆದಿದೆ. ಇಂದು ಆಕೆಯ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
ವೈದ್ಯನಾಗಿರುವ ಯುವಕ ಹಾಗೂ ಧರಣಿನಿರತೆ ವಧು ಹಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆರಂಭದಲ್ಲಿ ಇಬ್ಬರ ಕುಟುಂಬಸ್ಥರೂ ಇವರ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಎರಡೂ ಕುಟುಂಬವು ಮಾತುಕತೆ ನಡೆಸಿದ ಬಳಿಕ ಮದುವೆಗೆ ಒಪ್ಪಿಗೆ ದೊರಕಿತ್ತು.
ಈ ಹಿನ್ನೆಲೆಯಲ್ಲಿ ಮದುವೆಯ ಸಂಭ್ರಮದಲ್ಲಿದ್ದ ವಧು ಮಂಟಪಕ್ಕೆ ಹೋಗಿದ್ದಾಳೆ. ಆದರೆ ಆಕೆ ಹಾಗೂ ಆಕೆಯ ಕುಟುಂಬದವರು ಎಷ್ಟು ಕಾದರೂ ವರನಾಗಲೀ, ಆತನ ಕುಟುಂಬದವರಾಗಲೀ ಮದುವೆಗೆ ಹಾಜರಾಗಲೇ ಇಲ್ಲ.
ವಧು ನೇರವಾಗಿ ವರನ ಮನೆಗೆ ಹೋಗಿ ವಿಚಾರಿಸಿದರೆ ಅವರು ಮನೆಯ ಬಾಗಿಲು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ, ವಧು ಸಾಮಾಜಿಕ ಕಾರ್ಯಕರ್ತೆ ಪ್ರಮೀಳಾ ತ್ರಿಪಾಠಿ ಅವರನ್ನು ಸಂಪರ್ಕಿಸಿ ವರನ ಮನೆ ಮುಂದೆ ಧರಣಿ ಕುಳಿತಿದ್ದಾಳೆ. ಇಂದು ಎರಡನೆಯ ದಿನ ಧರಣಿ ನಡೆಯುತ್ತಿದೆ. ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ಬಳಿಕ ಕೋರ್ಟ್‌ನಲ್ಲಿಯೂ ಕೇಸ್ ದಾಖಲಾಗಿದೆ.
ಸದ್ಯ ನಾವೇನೂ ಮಾಡುವಂತಿಲ್ಲ ಎಂದಿರುವ ಇನ್ ಸ್ಪೆಕ್ಟರ್ ರಾಮ್ ಕುಮಾರ್ ಈ ಕುರಿತು ಮಾತನಾಡಿದ್ದು, ಸದ್ಯ ಕೋರ್ಟ್ ಏನು ಹೇಳುತ್ತದೋ ಅದನ್ನು ಮಾಡುತ್ತೇವೆ. ಧರಣಿ ನಡೆಯುವ ಸ್ಥಳದಲ್ಲಿ ಶಾಂತಿ ಕಾಪಾಡಲು ಮ್ಯಾಜಿಸ್ಟ್ರೇಟ್ ನಿರ್ದೇಶನದಂತೆ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದಿದ್ದಾರೆ.