
ಆಕೆ ಮಡಿದಳೆಂದು ತಿಳಿದು ಈತ ನೇಣಿಗೆ ಶರಣು: ವಿದ್ಯಾರ್ಥಿಗಳ ಸಾವಿನ ನಡುವೆ ಪ್ರೀತಿ-ಪ್ರೇಮದ ಶಂಕೆ?
Tuesday, November 23, 2021
ಬೆಂಗಳೂರು: ಕಾಲೇಜು ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಸಹಪಾಠಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಇದೀಗ ಆತನ ಸಾವಿನ ಹಿಂದೆ ಪ್ರೀತಿ-ಪ್ರೇಮದ ಗುಮಾನಿ ಮೂಡಿದೆ.
ನಗರದ ಚಿಕ್ಕಸಂದ್ರದ ಯುವತಿ ರಕ್ಷಿತಾ (17) ಹಾಗೂ ಯಲಹಂಕ ತಾಲೂಕಿನ ಹನಿಯೂರು ಗ್ರಾಮದ ಮನೋಜ್ ಮೃತಪಟ್ಟ ದುರ್ದೈವಿಗಳು. ಇವರಿಬ್ಬರೂ ನಗರದಲ್ಲಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ನಗರದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಮೃತ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು. ಜೊತೆಯಾಗಿ ರೀಲ್ ಇತ್ಯಾದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ರಕ್ಷಿತಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಈ ಬಗ್ಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಕ್ಷಿತಾ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಮನೋಜ್ ನಿನ್ನೆ ಸಂಜೆ ಹನಿಯೂರಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಇವರಿಬ್ಬರ ಮಧ್ಯೆ ಪ್ರೀತಿ ಇದ್ದಿರಬಹುದೆಂಬ ಅನುಮಾನ ಮೂಡಿದೆ. ಅದೇ ಕಾರಣಕ್ಕೆ ಮನೋಜ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮನೋಜ್ ಸಾವಿನ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಎರಡೂ ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.