-->
ಮಹಿಳಾ ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ ಬೆತ್ತಲೆ ಮಾಡಿ ಪರಿಶೀಲನೆ ನಡೆಸಿರುವ ವರ್ಷದ ಹಿಂದಿನ ಕತಾರ್ ವಿಮಾನ ನಿಲ್ದಾಣದ  ಪ್ರಕರಣ ಮತ್ತೆ ಮುನ್ನೆಲೆಗೆ!

ಮಹಿಳಾ ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ ಬೆತ್ತಲೆ ಮಾಡಿ ಪರಿಶೀಲನೆ ನಡೆಸಿರುವ ವರ್ಷದ ಹಿಂದಿನ ಕತಾರ್ ವಿಮಾನ ನಿಲ್ದಾಣದ ಪ್ರಕರಣ ಮತ್ತೆ ಮುನ್ನೆಲೆಗೆ!

ಕತಾರ್‌: ಕಳೆದ ವರ್ಷ ಅಕ್ಟೋಬರ್‌ ತಿಂಗಳಿನಲ್ಲಿ ಕತಾರ್‌ನ ದೋಹಾದ ಹಮದ್ ವಿಮಾನ ನಿಲ್ದಾಣದಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿತ್ತು. ಕತಾರ್ ಏರ್‌ವೇಸ್ ವಿಮಾನ ಏರಿ ಅನೇಕ ಮಹಿಳೆಯರು ಕುಳಿತಿದ್ದರು. ಅವರ ಬಳಿ ಬಂದಿರುವ ವಿಮಾನ ನಿಲ್ದಾಣದ ಶಸ್ತ್ರಸಜ್ಜಿತ ಸಿಬ್ಬಂದಿ ಅಲ್ಲಿದ್ದ ಎಲ್ಲಾ ಮಹಿಳೆಯರನ್ನು ಕೆಳಕ್ಕೆ ಇಳಿಸಿ ಕೊಠಡಿಯೊಂದಕ್ಕೆ ಹೋಗುವಂತೆ ತಿಳಿಸಿದ್ದಾರೆ. ಬಳಿಕ ಅವರನ್ನು ಅಲ್ಲಿಯ ದಾದಿಯೊಬ್ಬರು ಬೆತ್ತಲುಗೊಳಿಸಿ ಖಾಸಗಿ ಅಂಗದ ಪರೀಕ್ಷೆಯಲ್ಲಿ ತೊಡಗಿದರು. 

ತಪಾಸಣೆಗೊಳಗಾದ ಮಹಿಳೆಯರ ಪೈಕಿ ಹೆಚ್ಚಿನವರು ಆಸ್ಟ್ರೇಲಿಯಾದವರಾಗಿದ್ದರು. ಯಾಕಾಗಿ ಈ ರೀತಿಯ ತಪಾಸಣೆ ನಡೆಯುತ್ತಿದೆ ಎಂದು ಅವರಿಗೆ ಗೊತ್ತಾಗುತ್ತಿಲ್ಲ.‌ ಅಲ್ಲಿನ ಅದರ ಬಗ್ಗೆ ವಿವರಣೆ ನೀಡಿದರೂ ಏನೊಂದು ಅರ್ಥವಾಗದ ಸ್ಥಿತಿಯಲ್ಲಿ ಮಹಿಳೆಯರಿದ್ದರು. 

ಕೊನೆಗೆ ಅಲ್ಲಿ ನಿಜವಾಗಿ ನಡೆದಿರುವುದೇನೆಂದರೆ, ಹಮದ್ ವಿಮಾನ ನಿಲ್ದಾಣದ ತೊಟ್ಟಿಯೊಂದರಲ್ಲಿ ಆಗ ತಾನೇ ಹುಟ್ಟಿದ ಶಿಶುವೊಂದು ಪತ್ತೆಯಾಗಿತ್ತು. ಆಗಷ್ಟೇ ಜನಿಸಿರುವ ಹಿನ್ನೆಲೆಯಲ್ಲಿ ಆ ಮಗುವಿನ ತಾಯಿ ವಿಮಾನ ನಿಲ್ದಾಣದ ಒಳಗಡೆಯೇ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿದ್ದ ಎಲ್ಲಾ ಮಹಿಳೆಯರನ್ನೂ ಈ ರೀತಿ ತಪಾಸಣೆಗೆ ಒಳಪಡಿಸಲಾಗಿತ್ತು. 

ಈ ಬಗ್ಗೆ ತಪಾಸಣೆಗೆ ಒಳಗಾದ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ದೂರು ಕೂಡಾ ನೀಡಿದ್ದರು. ಬಳಿಕ ಈ ವಿಚಾರ ಭಾರೀ ಬಹುದೊಡ್ಡ ಮಟ್ಟದಲ್ಲಿ ಚರ್ಚೆಯಾಗಿ ಕತಾರ್ ಸರಕಾರವೇ ಮಹಿಳೆಯರ ಕ್ಷಮೆ ಯಾಚನೆ ಮಾಡಿತ್ತು. ಮಾತ್ರವಲ್ಲದೆ ವಿಮಾನ ನಿಲ್ದಾಣದ ಅಧಿಕಾರಿಯನ್ನು ಅಮಾನತುಗೊಳಿಸಿರುವ ಸರಕಾರ ಆತನಿಗೆ ಜೈಲು ಶಿಕ್ಷೆಯನ್ನೂ ವಿಧಿಸಲಾಗಿತ್ತು.

ಈ ಘಟನೆ ನಡೆದು ಒಂದು ವರ್ಷ ಕಳೆದ ಬಳಿಕ ಮತ್ತೆ ಈ ಸುದ್ದಿ ಮುನ್ನಲೆಗೆ ಬಂದಿದೆ. ಇದಕ್ಕೆ ಕಾರಣ, ಅಂದು ಹಿಂಸೆ ಅನುಭವಿಸಿರುವ ಮಹಿಳೆಯರು ಇದೀಗ ಪುನಃ ತಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಕೋರಿ ಕತಾರ್‌ ವಿರುದ್ಧ ಸಿಡಿದೆದ್ದಿದ್ದಾರೆ. ಆ ಘಟನೆ ಬಳಿಕ ಮೌನ ವಹಿಸಿರುವ ಇವರೆಲ್ಲಾ ಮತ್ತೆ ರೊಚ್ಚಿಗೆದ್ದಿದ್ದು, ನ್ಯಾಯಕ್ಕಾಗಿ ಹೋರಾಟ ಶುರು ಮಾಡಿದ್ದಾರೆ.

ತಮಗಾಗಿರುವ ಭಯಾನಕ ಅನುಭವವನ್ನು ಮಹಿಳೆಯರು ಇದೀಗ ಬಿಚ್ಚಿಟ್ಟಿದ್ದಾರೆ. ‘ಕತಾರ್ ಏರ್‌ವೇಸ್ ವಿಮಾನದಿಂದ ಶಸ್ತ್ರಸಜ್ಜಿತ ಸಿಬ್ಬಂದಿಯು ಆಂಬ್ಯುಲೆನ್ಸ್‌ಗೆ ನಮ್ಮನ್ನು ಕರೆದೊಯ್ಯುವ ಮೊದಲು ಟಾರ್ಮ್ಯಾಕ್‌ನಲ್ಲಿ ನಮ್ಮನ್ನು ಬೆತ್ತಲು ಮಾಡಿ ದಾದಿಯರು ಪರಿಶೀಲನೆ ಮಾಡಿದ್ದಾರೆ. ನಮಗೆ ಏನಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ನಾವು ಯಾರೂ ಈ ರೀತಿಯ ಕೆಟ್ಟ ಪರೀಕ್ಷೆಗೆ ಸಮ್ಮತಿಯನ್ನೂ ಕೊಡಲಿಲ್ಲ. ಕಾರಣ ಕೇಳಿದಾಗ ನಮಗೆ ಯಾರು ಕೂಡ ಸ್ಪಷ್ಟ ಉತ್ತರ ಕೊಡುತ್ತಿಲ್ಲ. ಆ ದಿನ ಅದೆಷ್ಟು ಹಿಂಸೆ ಅನುಭವಿಸಿದ್ದೇವೆ ಎನ್ನುವುದನ್ನು ಹೇಳುವುದು ಕೂಡ ಅಸಾಧ್ಯ. ಅದು ಅತ್ಯಂತ ಭಯಾನಕ ಆಕ್ರಮಣಕಾರಿ ದೈಹಿಕ ಪರೀಕ್ಷೆಯಾಗಿತ್ತು ಎಂದು ಹೇಳಿದ್ದಾರೆ.

‘ಬಂದೂಕು ಹಿಡಿದುಕೊಂಡು ಬಂದಿದ್ದ ಆ ಶಸ್ತ್ರಧಾರಿಗಳನ್ನು ನೋಡಿದಾಗ ನಮಗೆ ಜೀವವೇ ಬಾಯಿಗೆ ಬಂದಂತಾಗಿತ್ತು. ಒಂದೋ ನಮ್ಮನ್ನು ಈತ ಕೊಲ್ಲುತ್ತಾರೆ. ಇಲ್ಲವೇ ವಿಮಾನದಲ್ಲಿ ನಮ್ಮ ಗಂಡಂದಿರನ್ನು ಮುಗಿಸುತ್ತಾರೆ ಎಂದು ಮಹಿಳೆಯರೊಬ್ಬರು ಹೇಳಿದ್ದಾರೆ.

ಓರ್ವ ಅಧಿಕಾರಿಯನ್ನು ಅಮಾನತು ಮಾಡಿ ಕತಾರ್‌ ಮೌನವಹಿಸಿದರೆ ಸಾಕಾಗೋದಿಲ್ಲ. ಇನ್ನು ಮುಂದೆಯೂ ತಮ್ಮ ದೇಶದಲ್ಲಿ ಎಲ್ಲಾ ಮಹಿಳಾ ಪ್ರಯಾಣಿಕರ ಸುರಕ್ಷತೆ ಮಾಡುವುದಾಗಿ ಕತಾರ್ ವಾಗ್ದಾನ ಮಾಡಬೇಕು. ಇಂಥಹ ದುರ್ಘಟನೆ ಬಗ್ಗೆ ಇಡೀ ವಿಶ್ವದ ಮುಂದೆ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಈ ವಿಷಯವನ್ನು ನಾವು ಸುಮ್ಮನೇ ಬಿಡುವುದಿಲ್ಲ ಎಂದು ಆಸ್ಟ್ರೇಲಿಯಾದ ಸಂತ್ರಸ್ತ ಮಹಿಳೆಯರು ಹೋರಾಟ ನಡೆಸುತ್ತಿದ್ದಾರೆ. ಆದ್ದರಿಂದ ಪುನಃ ಈ ವಿಷಯ ಇದೀಗ ವಿಶ್ವವ್ಯಾಪಿ ಚರ್ಚೆಗೆ ಗ್ರಾಸವಾಗಿದೆ.

Ads on article

Advertise in articles 1

advertising articles 2

Advertise under the article