
ತಾಯಿಯ ಕೋಟಿ ಕೋಟಿ ರೂ. ಚಿನ್ನಾಭರಣವನ್ನೇ ದೋಚಿ ಎಸ್ಕೇಪ್ ಆಗಿರುವ ಮಗಳಿಗಾಗಿ ಪೊಲೀಸರಿಂದ ಹುಡುಕಾಟ!
11/12/2021 10:48:00 PM
ಬೆಂಗಳೂರು: ಕೋಟಿ ಕೋಟಿ ರೂ. ಬೆಲೆ ಬಾಳುವ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾಳೆಂದು ಆರೋಪಿಸಿ ತಾಯಿಯೇ ಮಗಳ ಮೇಲೆ ದೂರು ದಾಖಲಿಸಿರುವ ಘಟನೆ ಜೆಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸುಮಾರು 4 ಕೋಟಿ ರೂ. ಮೌಲ್ಯದ ಏಳೂವರೆ ಕೆಜಿ ವಜ್ರ ಹಾಗೂ ಚಿನ್ನಾಭರಣವನ್ನು ದೋಚಿ ಮಗಳು ವಂಚಿಸಿದ್ದಾಳೆಂದು ತಾಯಿ ದೂರು ನೀಡಿದ್ದಾರೆ. ಈ ಬಗ್ಗೆ ಜೆ.ಪಿ.ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಎಸ್ಕೇಪ್ ಆಗಿರುವ ಮಗಳಿಗಾಗಿ ತನಿಖೆ ಆರಂಭಿಸಿದ್ದಾರೆ.
ಜೆ.ಪಿ.ನಗರ ಠಾಣಾ ವ್ಯಾಪ್ತಿ ನಿವಾಸು ವಿಜಯಲಕ್ಷ್ಮಿ ಎಂಬುವರು ತಮ್ಮ ಮಗಳು ತೇಜವಂತಿ ಎಂಬಾಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಜಯಲಕ್ಷ್ಮಿಯವರು ಕೆಲ ದಿನಗಳ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅಪರೇಶನ್ಗೆ ಒಳಗಾಗಿದ್ದರು. ಈ ಸಂದರ್ಭ ಮನೆಗೆ ಬಂದಿದ್ದ ಮಗಳು ತೇಜವಂತಿ ಲಾಕರ್ನಲ್ಲಿ ಸುರಕ್ಷಿತವಾಗಿ ಇಡುವುದಾಗಿ ಹೇಳಿ ನಾಲ್ಕು ಕೋಟಿ ರೂ. ಮೌಲ್ಯದ ಚಿನ್ನ, ವಜ್ರದ ಒಡವೆಗಳನ್ನು ತೆಗೆದುಕೊಂಡು ಹೋಗಿದ್ದಳು. ಆದರೆ ಇಷ್ಟೊಂದು ಮೊತ್ತದ ಚಿನ್ನವನ್ನು ಕೊಂಡೊಯ್ದ ತೇಜವಂತಿ ಆ ಬಳಿಕ ನಾಪತ್ತೆಯಾಗಿದ್ದಾಳೆ.
ಈ ಕುರಿತು ವಿಜಯಲಕ್ಷ್ಮಿಯವರು ಜೆ.ಪಿ.ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ತೇಜವಂತಿ ಮೇಲೆ ಭಾರತೀಯ ದಂಡಸಂಹಿತೆಯ ಸೆಕ್ಷನ್ 420ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆಕೆಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.