ಖತರ್ನಾಕ್ ಲೇಡಿ ವಂಚಕಿಯ ವಂಚನೆ ಹೇಗಿದೆ ನೋಡಿ: 'ಫ್ರಾಡ್ ಪಲ್ಲವಿ' ಸಂಚು ಬಯಲಿಗೆಳೆದ ವಕೀಲ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಿ. ಪರಮೇಶ್ವರ್ ಸಹೋದರನ ಪುತ್ರಿಯೆಂದು ಹೇಳುತ್ತಾ ಹಲವಾರು ಮಂದಿಗೆ ಲಕ್ಷಾಂತರ ರೂ. ಪಂಗನಾಮ ಹಾಕಿರುವ 'ಫ್ರಾಡ್ ಪಲ್ಲವಿ'ಯ ಕಾರ್ಯವಿಧಾನ ಹೇಗಿದೆ ಎಂಬ ಕುತೂಹಲಕಾರಿ ವಿಚಾರಗಳು ಹೊರಬೀಳತೊಡಗಿವೆ. 

ಈಕೆ ಯಾವ ರೀತಿ ಜನರನ್ನು ತನ್ನ ಮೋಸದ ಬಲೆಗೆ ಬೀಳಿಸುತ್ತಿದ್ದಳು, ಅವರಿಂದ ಯಾವ ರೀತಿ ಹಣ ವಸೂಲಾತಿ ಮಾಡುತ್ತಿದ್ದಳು, ಈವರೆಗೆ ಎಷ್ಟು ಮಂದಿಗೆ ವಂಚನೆ ಮಾಡಿದ್ದಾಳೆ ಎಂಬುದರ ಸಂಪೂರ್ಣ ವಿವರವನ್ನು ವಕೀಲರೊಬ್ಬರು ವಿವರಿಸಿದ್ದಾರೆ.

ಈಕೆಯ ಫ್ರಾಡ್ ಬಗ್ಗೆ ಆನಂದ್​ ಮೂರ್ತಿ, ಸುಜಾತಾ, ರಾಜೇಶ್ವರಿ ಎಂಬುವರು ದೂರು ದಾಖಲಿಸಿದ್ದಾರೆ. ಗೌರಮ್ಮ (13 ಲಕ್ಷ ರೂ.), ಸುನಿತಾ (22 ಲಕ್ಷ ರೂ.) ಮಂಜುಳ (50 ಸಾವಿರ ರೂ.), ನಟರಾಜ್​ (9 ಲಕ್ಷ ರೂ.), ಯೋಗೇಶ್​ (5 ಲಕ್ಷ ರೂ.) ಹಾಗೂ ನಾಗರಾಜು, ಕೆಂಪರಾಜು, ಗುರುಸಿದ್ದಯ್ಯ ಮತ್ತು ಆನಂದ್​ ಸೇರಿದಂತೆ ಅನೇಕರಿಗೆ ಲಕ್ಷಾಂತರ ರೂ. ಹಣವನ್ನು ಈಕೆ ವಂಚನೆ ಮಾಡಿದ್ದಾಳೆಂದು ವಕೀಲರು ಮಾಹಿತಿ ನೀಡಿದ್ದಾರೆ. ಇನ್ನು ಪಲ್ಲವಿ ಕಾರ್ಯವಿಧಾನ ಹೇಗಿರುತ್ತದೆ ಎಂದು ಅವರು ವಿವರಿಸಿದ್ದಾರೆ. 

ಆರಂಭದಲ್ಲಿ ಪಲ್ಲವಿ ತಾನು ಬಲೆಗೆ ಕೆಡವಲು ಗುರುತಿಸಿರುವ ವ್ಯಕ್ತಿಯ ಬಳಿ ಕಾರೊಂದನ್ನು ಬಾಡಿಗೆಗೆ ಕೇಳುತ್ತಾಳಂತೆ. ಆಗ ತಾನು ಮಾಜಿ ಡಿಸಿಎಂ ಪರಮೇಶ್ವರ್​ ಅವರ ಅಣ್ಣನ ಮಗಳು. ನನಗೆ ವಿಧಾನಸೌಧದಲ್ಲಿ ಎಲ್ಲರೂ ಪರಿಚಯಸ್ಥರೇ. ನನಗಾಗಿ ಯಾವ ಕೆಲಸ ಬೇಕಾದರೂ ಅವರು ಮಾಡಿಕೊಡುತ್ತಾರೆ. ನಿಮ್ಮ ಯಾವ ಕೆಲಸವನ್ನು ಸುಲಭವಾಗಿ ಮಾಡಿಕೊಡುತ್ತೇನೆಂದು ಬಣ್ಣದ ಮಾತುಗಳಿಂದ  ನಂಬಿಸಿ, ಅವರಿಂದ ಕಾರೊಂದನ್ನು ಬಾಡಿಗೆಗೆ ಪಡೆದುಕೊಳ್ಳುತ್ತಾಳೆ. ಬಳಿಕ ಸುಮಾರು 1-2 ತಿಂಗಳವರೆಗೆ ಅವರ ಡೀಸೆಲ್​, ಪೆಟ್ರೋಲ್ ಖರ್ಚಿನಲ್ಲೇ ಕಾರನ್ನು ಉಪಯೋಗಿಸುತ್ತಾಳೆ. ಈ ಸಮಯದಲ್ಲಿ ಅವರನ್ನು ತುಂಬಾ ಪರಿಚಯ ಮಾಡಿಕೊಳ್ಳುತ್ತಾಳೆ. ಅಲ್ಲದೆ, ಗೊತ್ತಿಲ್ಲದ ಹಾಗೇ ಕೆಲವು ವೀಡಿಯೋಗಳನ್ನು ಸಹ ಮಾಡಿಕೊಳ್ಳುತ್ತಾಳೆ.

ಕೊನೆಗೇ ಕಾರಿನ ಬಾಡಿಗೆ ಏನಾದರೂ ಅವರು ಕೇಳಿದ್ದಲ್ಲಿ ನನ್ನ ಬಳಿ ನಿಮ್ಮ ಕೆಲವೊಂದು ವೀಡಿಯೋಗಳಿವೆ ನಿಮ್ಮ ಮೇಲೆ ಅತ್ಯಾಚಾರ ಕೇಸ್​ ದಾಖಲಿಸುತ್ತೇನೆಂದು ಬೆದರಿಸುತ್ತಾಳೆ. ಅಲ್ಲದೆ, ನಾನು ಎಸ್ಸಿ-ಎಸ್​ಟಿ ಸಮುದಾಯಕ್ಕೆ ಸೇರಿದವಳು ಎನ್ನುವ ಮೂಲಕ ಕಾನೂನಿನ ದುರುಪಯೋಗ ಸಹ ಮಾಡಿಕೊಂಡು ಹೆಚ್ಚು ಬಾಡಿಗೆ ಡಿಮ್ಯಾಂಡ್​ ಮಾಡುವ ವ್ಯಕ್ತಿಯ ವಿರುದ್ಧ ರೇಪ್​ ಕೇಸ್​ ದಾಖಲಿಸಿ ಜೈಲಿಗೆ ಕಳುಹಿಸುವುದೇ ಈಕೆಯ ದುಷ್ಕೃತ್ಯವಾಗಿದೆ ಎಂದು ವಕೀಲರು ಹೇಳಿದ್ದಾರೆ. ಫ್ರಾಡ್​ ಪಲ್ಲವಿ ಮಾಡುವ ಮೊದಲ ಕೆಲಸವೆಂದರೆ ಜನರನ್ನು ಮರಳು ಮಾಡುವುದು. ನನಗೆ ಜಿ.ಪರಮೇಶ್ವರ್ ಚಿಕ್ಕಪ್ಪ ಆಗಬೇಕು. ನನಗೆ ರಾಜಕೀಯ ಲಿಂಕ್​ ಇದೆ. ವಿಧಾನಸೌಧದಲ್ಲಿ ಸುಲಭವಾಗಿ ಕೆಲಸ ಆಗುತ್ತದೆ ಎಂದು ನಂಬಿಸಿ, ವಂಚಿಸುತ್ತಾಳೆ. ಯಾರು ಆಕೆಗೆ ವಿರುದ್ಧವಾಗಿ ಹೋಗುತ್ತಾರೋ ಅವರ ವಿರುದ್ಧ ಸುಳ್ಳು ರೇಪ್ ಕೇಸ್​ ಹಾಕುತ್ತಾಳೆ. ಇದರ ಬಗ್ಗೆ ಸಾರ್ವಜನಿಕರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ವಕೀಲರು ಮನವಿ ಮಾಡಿದ್ದಾರೆ. 

ಜನರ ಮನೆಗಳನ್ನು ಬಾಡಿಗೆಗೆ ತೆಗೆದುಕೊಳ್ಳುವ ವಂಚಕಿ ಪಲ್ಲವಿ, ಬಾಡಿಗೆಯನ್ನೇ ಕಟ್ಟುವುದಿಲ್ಲ. ಬಾಡಿಗೆ ಕೇಳಿದರೆ, ಸುಳ್ಳು ಅತ್ಯಾಚಾರ​ ಕೇಸ್​ ದಾಖಲಿಸುತ್ತಾಳೆ. ಮೊದಲೇ ಮಹಿಳೆಯಾದ್ದರಿಂದ ಪೊಲೀಸರು ಬಹುಬೇಗನೇ ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಒಂದು ವೇಳೆ ಪ್ರಕರಣ ದಾಖಲಿಸಿದಿದ್ದಲ್ಲಿ ತಮ್ಮ ಮೇಲೆಯೂ ಆರೋಪ ಮಾಡಬಹುದೇನೋ ಎಂಬ ಭಯದಿಂದ ದೂರು ದಾಖಲಿಸಿಕೊಳ್ಳುತ್ತಾರೆ. ಆದರೆ, ಆರೋಪಿ ಬಂಧನದ ಬಳಿಕ ಪೊಲೀಸರು ತನಿಖೆ ನಡೆಸಿದಾಗ ಅಮಾಯಕ ಜನರಿಗೆ ಈಕೆಯಿಂದಲೇ ಅನ್ಯಾಯ ಆಗಿರುವುದು ಬೆಳಕಿಗೆ ಬರುತ್ತದೆ. ಬಳಿಕ ಪಲ್ಲವಿ ವಿರುದ್ಧವೇ ಇದೀಗ ಸಾಕಷ್ಟು ದೂರುಗಳು ದಾಖಲಾಗಿವೆ. ಹೀಗಾಗಿ ಈಕೆಯ ಬಗ್ಗೆ ಸಾರ್ವಜನಿಕರು ತುಂಬಾ ಎಚ್ಚರಿಕೆಯಿಂದಿರಬೇಕೆಂದು ವಕೀಲರು ಮನವಿ ಮಾಡಿದ್ದಾರೆ.