ಜನರನ್ನು ಭಯದಲ್ಲಿ ಬದುಕುವಂತೆ ಮಾಡುತ್ತಿದ್ದಾರೆ ; ವಿಟ್ಲದಲ್ಲಿ ರೈತರ ಸಭೆ
ಐಎಎಸ್ ಅಧಿಕಾರಿಗಳಿಗೆ ಮಣ್ಣಿನಲ್ಲಿ ಹುಟ್ಟಿ ಮಣ್ಣಿನಲ್ಲೇ ಬೆಳೆದ ರೈತರ ಕಷ್ಟ ಗೊತ್ತಿಲ್ಲ. ರೈತರು ಕೊಟ್ಟ ದೂರಿಗೆ ಕ್ರಮ ಕೈಗೊಳ್ಳುವುದಿಲ್ಲ, ಕೇಳಲಾದ ಮಾಹಿತಿಗೆ ಉತ್ತರವಿಲ್ಲ. ಬದಲಾಗಿ ಜನರನ್ನು ಭಯದಲ್ಲಿ ಬದುಕುವಂತೆ ಅಧಿಕಾರಿಗಳು ಮಾಡುತ್ತಿದ್ದಾರೆ. ನಮ್ಮ ಹೋರಾಟವನ್ನು ಹಗುರವಾಗಿ ತೆಗೆದುಕೊಳ್ಳದೆ ಅಧಿಕಾರಿ ವರ್ಗ ಒಗ್ಗಟ್ಟಿನಿಂದ ಬೆಂಬಲ ಸೂಚಿಸಬೇಕು ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಹೇಳಿದರು.
ಅವರು ವಿಟ್ಲದ ಮಂಗಳಪದವಿನಲ್ಲಿ ನಡೆದ ವಿಟ್ಲ ರೈತ ಹೋರಾಟ ಸಮಿತಿ ಉಡುಪಿ-ಕಾಸರಗೋಡು 400 ಕೆ.ವಿ. ವಿದ್ಯುತ್ ಮಾರ್ಗದಿಂದ ಸಂತ್ರಸ್ತರಾಗುವ ರೈತರ ಸಭೆಯಲ್ಲಿ ಮಾತನಾಡುತ್ತಿದ್ದರು.
ಪುತ್ತೂರಿನಲ್ಲಿ ರೈತ ಮಾರುಕಟ್ಟೆಯನ್ನು ಹಾಳು ಮಾಡಿದ ಅಧಿಕಾರಿ ವರ್ಗ ರೈತರ ಜಮೀನು ಉಳಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಜನರು ಸೋತಾಗ ಯಾವ ರಾಜಕೀಯ ಪಕ್ಷದವರೂ ಹತ್ತಿರಕ್ಕೆ ಬರುವುದಿಲ್ಲ. ವಿಟ್ಲ ಪೇಟೆಯಿಂದ ಮೆರವಣಿಗೆ ಮೂಲಕ ನಾಡ ಕಚೇರಿ ಚಲೋ ಕಾರ್ಯಕ್ರಮವನ್ನು ತಕ್ಷಣಕ್ಕೆ ಹಮ್ಮಿಕೊಂಡಿದ್ದು, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವ ತನಕ ಉಪ ತಹಸೀಲ್ದಾರ್ ಕಚೇರಿ ಮುಂದೆ ಧರಣಿ ಕೂರಲಾಗುವುದು ಎಂದು ಹೇಳಿದರು.
ಮಾಹಿತಿ ಹಕ್ಕು ಕಾರ್ಯಕರ್ತ ಸಂಜೀವ ಕಬಕ ಮಾತನಾಡಿ ಆಕ್ಷೇಪ ಅರ್ಜಿಗಳ ಪರಿಸ್ಥಿತಿ ಏನಾಗಿದೆ ಎಂಬಲ್ಲಿಂದ ಹಿಡಿದು ಪ್ರತಿ ಹಂತದಲ್ಲಿ ಯೋಜನೆಯ ಮಾಹಿತಿ ಪಡೆಯುವ ಕಾರ್ಯ ಬೆನ್ನು ಬಿಡದೆ ಮಾಡಬೇಕು. ಅಂತಿಮ ಹಂತದಲ್ಲಿ ಕಾನೂನು ಹೋರಾಟಕ್ಕೆ ಹೋದಾಗ ದಾಖಲೆಗಳ ಅಗತ್ಯ ಇದೆ. ರೈತರನ್ನು ಕತ್ತಲೆಯಲ್ಲಿ ಇಟ್ಟು ಮಾಡುವ ಕಾರ್ಯಕ್ಕೆ ಭವಿಷ್ಯದಲ್ಲಿ ಪ್ರತಿಯೊಬ್ಬರೂ ಬೆಲೆ ತೆರಬೇಕಾಗುತ್ತದೆ ಎಂದರು.
ಲೋಕನಾಥ ಶೆಟ್ಟಿ ಕೊಲ್ಯ, ಕೃಷ್ಣಪ್ರಸಾದ್, ಸುಭಾಷ್ ರೈ ಹೋರಾಟದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು, ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಬಂಟ್ವಾಳ ಕಾರ್ಯದರ್ಶಿ ಸುದೇಶ್ ಮಯ್ಯ, ವಿಟ್ಲ ರೈತ ಹೋರಾಟ ಸಮಿತಿ ಉಪಾಧ್ಯಕ್ಷ ವಿಷ್ಣು ಭಟ್ ಆಲಂಗಾರು, ಕಾರ್ಯದರ್ಶಿ ಲಕ್ಷ್ಮೀನಾರಾಯಣ ಮತ್ತಿತರರು ಉಪಸ್ಥಿತರಿದ್ದರು. ಸಂತ್ರಸ್ತ ರೈತ ಚಿತ್ತರಂಜನ್ ಪ್ರಸ್ತಾಪನೆಗೈದರು. ವಿಟ್ಲ ರೈತ ಹೋರಾಟ ಸಮಿತಿ ಕಾರ್ಯದರ್ಶಿ ರೋಹಿತಾಶ್ವ ಕಾರ್ಯಕ್ರಮ ನಿರೂಪಿಸಿದರು.