ನಗ್ನ ವೀಡಿಯೋ ಕಾಲ್ ಬ್ಲಾಕ್ ಮೇಲ್: ಅನಾಮಧೇಯ ಕರೆ ಸ್ವೀಕರಿಸುವ ಮುನ್ನ ಎಚ್ಚೆತ್ತುಕೊಳ್ಳಿ

ನವದೆಹಲಿ : ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಅಪರಾಧಿಗಳು ಮೊಬೈಲ್ ಗೆ ಕರೆ ಮಾಡಿ ಜನತೆಯನ್ನು ವಂಚಿಸಿ ದುಡ್ಡು ಮಾಡುವ ದುಷ್ಕೃತ್ಯದಲ್ಲಿ ತೊಡಗುತ್ತಿದ್ದಾರೆ‌‌. ಹಾಗಾಗಿ ಅನಾಮಧೇಯ ವೀಡಿಯೋ ಕರೆಗಳನ್ನು ಸ್ವೀಕರಿಸುವ ಮುನ್ನ ಎಚ್ಚರಿಕೆ ವಹಿಸಬೇಕಾದ ಅಗತ್ಯ ಎದುರಾಗಿದೆ. ನಗ್ನ ವೀಡಿಯೋ ಮೂಲಕ ಜನರನ್ನು ಬ್ಲ್ಯಾಕ್ ಮೇಲ್ ಮಾಡುವ ಹಲವಾರು ತಂಡ ದೇಶದಲ್ಲಿ ಸಕ್ರಿಯವಾಗಿದೆ. ಈ ಸೈಬರ್ ಅಪರಾಧಗಳು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ದೆಹಲಿ ವಿವಿಯ 35 ವರ್ಷದ ಪ್ರಾಧ್ಯಾಪಕರೊಬ್ಬರು ಇತ್ತೀಚೆಗೆ ಅನಾಮಧೇಯ ಸಂಖ್ಯೆಯನ್ನು ಸ್ವೀಕರಿಸಿ ಪೇಚಿಗೆ ಸಿಲುಕಿಕೊಂಡಿದ್ದಾರೆ. ಅವರು ತಮ್ಮ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ವೀಡಿಯೋ ಕರೆಯನ್ನು ಸ್ವೀಕರಿಸಿದ್ದಾರೆ. ಅತ್ತಕಡೆಯಿಂದ ನಗ್ನ ಹುಡುಗಿ ಕಾಣಿಸಿಕೊಂಡಿದ್ದಾಳೆ. ನಗ್ನ ಯುವತಿಯ ವೀಡಿಯೋ ಕಂಡ ತಕ್ಷಣ ಇರಿಸುಮುರಿಸುಗೊಂಡ ಅವರು ಕರೆಯನ್ನು ಡಿಸ್‌ಕನೆಕ್ಟ್ ಮಾಡುವ ಮೊದಲೇ, ಸೈಬರ್ ಕ್ರಿಮಿನಲ್‌ಗಳು ಪ್ರೊಫೆಸರ್ ಅಶ್ಲೀಲ ಕ್ಲಿಪ್ ವೀಕ್ಷಿಸುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ. ಆ ಬಳಿಕ ಅವರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟು ಕಿರುಕುಳ ನೀಡಲು ಆರಂಭಿಸಿದ್ದಾರೆ.

ಈ ಬಗ್ಗೆ ದೂರು ನೀಡಿರುವ ಪ್ರೊಫೆಸರ್ "ರಾತ್ರಿ ಸುಮಾರು 2ಗಂಟೆ ಹೊತ್ತಿಗೆ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದೆ. ನಾನು ಕರೆ ಸ್ವೀಕರಿಸಿದ ಸಂದರ್ಭ ಅತ್ತಕಡೆಯಿಂದ ನಗ್ನ ಯುವತಿಯೋರ್ವಳನ್ನು ಕಂಡಿದ್ದೇನೆ. ತಕ್ಷಣ ಕರೆಯನ್ನು ಡಿಸ್ ಕನೆಕ್ಟ್ ಮಾಡಿದ್ದೇನೆ. ಆದರೆ, ನಾನು ನಿಖರವಾಗಿ ಏನೆಂದು ಲೆಕ್ಕಾಚಾರ ಮಾಡುವ ಮೊದಲೇ ಮೆಸೆಂಜರ್‌ನಲ್ಲಿ ನನ್ನ ವೀಡಿಯೊ ಕರೆಯ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಸ್ವೀಕರಿಸಿದ್ದೇನೆ’ ಎಂದು ಕಂಗಾಲಾಗಿರುವ ಪ್ರೊಫೆಸರ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ಇದರಿಂದ ಭೀತನಾದ ನಾನು ತಕ್ಷಣವೇ ಬಳಕೆದಾರನನ್ನು ಬ್ಲಾಕ್ ಮಾಡಿದ್ದೇನೆ.‌ ಆದರೆ ಅದಾಗಿ ಒಂದು ಗಂಟೆಯ ಬಳಿಕ, ತನಗೆ ಆಡಿಯೋ ಕರೆಯೊಂದು ಬಂದಿದ್ದು, ಅಲ್ಲಿ ಇನ್ನೊಬ್ಬ ವ್ಯಕ್ತಿ ಐದು ನಿಮಿಷಗಳಲ್ಲಿ ಡಿಜಿಟಲ್ ಪಾವತಿ ಅಪ್ಲಿಕೇಶನ್ ಮೂಲಕ 20,000 ರೂ. ಪಾವತಿಸುವಂತೆ ಕೇಳಿದ್ದಾನೆ. ಪಾವತಿಸದಿದ್ದರೆ, ಈ ಸ್ಕ್ರೀನ್‌ಶಾಟ್‌ಗಳನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬ ನೋಡುವಂತೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದಾನೆ.

"ಇದರಿಂದ ಹೆದರಿದ ನಾನು ನನ್ನ ಫೇಸ್‌ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದೇನೆ. ಆ ರಾತ್ರಿಯ ಬಳಿಕ ಇಲ್ಲಿಯವರೆಗೆ ಬೇರೆ ಯಾವುದೇ ತೊಂದರೆ ಆಗಲಿಲ್ಲ ಆದರೆ ನಾನು ಇನ್ನೂ ಚಿಂತಿತನಾಗಿದ್ದೇನೆ” ಎಂದು ಅವರು ತಿಳಿಸಿದ್ದಾರೆ.