ಬಾಲಿವುಡ್ ನಟ ಆಮೀರ್ ಖಾನ್ ಮೂರನೇ ವಿವಾಹಕ್ಕೆ ಸಿದ್ಧತೆ: ಮಗಳ ವಯಸ್ಸಿನವಳೇ ವಧು!

ಮುಂಬೈ: ಬಾಲಿವುಡ್‌ ನಟ ಆಮೀರ್‌ ಖಾನ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಇದೀಗ ಅವರು ಮೂರನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಮೊದಲನೆಯ ಪತ್ನಿ ರೀನಾ ದತ್ತಾ ಜೊತೆಯಲ್ಲಿ 15 ವರ್ಷ ಸಂಸಾರ ಮಾಡಿ, ಆಕೆಗೆ ವಿಚ್ಛೇದನ ನೀಡಿ, ಕಿರಣ್‌ ರಾವ್‌ ಅವರನ್ನು ವಿವಾಹವಾದರು. ಆಕೆಯ ಜೊತೆ ಮತ್ತೆ 15 ವರ್ಷ ದಾಂಪತ್ಯ ಜೀವನ ನಡೆಸಿ, ಆಕೆಗೂ ಇತ್ತೀಚೆಗಷ್ಟೇ ಡಿವೋರ್ಸ್‌ ನೀಡಿದ್ದರು. 56ನೇ ವರ್ಷದ ಆಮೀರ್ ಖಾನ್ ಇದೀಗ ಮೂರನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಮೊದಲ ಪತ್ನಿಯಿಂದ ಇಬ್ಬರು ಮಕ್ಕಳು ಮತ್ತು ಎರಡನೆಯ ಪತ್ನಿಯಿಂದ ಓರ್ವ ಪುತ್ರನನ್ನು ಪಡೆದಿರುವ ಆಮೀರ‌ ಖಾನ್‌ 'ಮೌನಂ ಸಮ್ಮತಿ ಲಕ್ಷಣಂ' ಎಂಬಂತೆ ಈ ಸುದ್ದಿಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೆ ಮದುವೆ ಆಗುತ್ತಿರುವುದು ನಿಜ ಎಂಬಂತೆ ಪರೋಕ್ಷವಾಗಿ ಹೇಳಿದ್ದಾರೆ. 

ಕೆಲ ತಿಂಗಳ ಹಿಂದೆ ಆಮೀರ್ ಖಾನ್ ತಮ್ಮ ಎರಡನೆಯ ಪತ್ನಿ ಕಿರಣ್ ರಾವ್​ಗೆ ವಿಚ್ಛೇದನ ನೀಡಿದಾಗ ಭಾರೀ ಸುದ್ದಿಯಾಗಿದ್ದರು. ಅಲ್ಲದೆ ನೆಟ್ಟಿಗರ ಟೀಕೆಗೂ ಒಳಗಾಗಿದ್ದರು. ಏಕಾಏಕಿ ಕಿರಣ್ ರಾವ್ ಜೊತೆ ವಿವಾಹ ಬಂಧವನ್ನು ಮುರಿದಿರುವ ಅಸಲಿ ಕಾರಣ ತಿಳಿಸದೆ, ತಾವಿಬ್ಬರೂ ಸ್ನೇಹಿತರು, ಸ್ನೇಹಿತರಾಗಿಯೇ ಇರುತ್ತೇವೆ ಎಂದು ಜನರ ಮುಂದೆ ಹೇಳಿಕೆ ನೀಡಿದ್ದರು. ಇದೀಗ ಮೂರನೆಯ ಮದುವೆಗೆ ಅವರು ಸಿದ್ಧತೆ ಮಾಡಿಕೊಂಡಿರುವುದು ಬಹುತೇಕ ಖಚಿತವಾಗಿದೆ. 

ಸದ್ಯ ಆಮೀರ್‌ ಖಾನ್‌ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ರಿಲೀಸ್ ಆಗಲು ಸಜ್ಜಾಗುತ್ತಿದೆ. ಆ ಸಿನಿಮಾ ಬಿಡುಗಡೆಯಾದ ತಕ್ಷಣ ತಮ್ಮ ಮುಂದಿನ ಮದುವೆಯ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಡಿಸೆಂಬರ್​ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಸದ್ಯ ಕಾರಣಾಂತರಗಳಿಂದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. 

ಇದಕ್ಕೆ ಆಮೀರ್‌ ಖಾನ್‌ ಅವರ ವಿಚ್ಛೇದನ ಹಾಗೂ ಮರುಮದುವೆಯೇ ಕಾರಣ ಎಂಬ ಸುದ್ದಿ ಕೇಳಿ ಬರುತ್ತಿದೆ. ಎಲ್ಲೆಡೆ ಈ ಸಿನಿಮಾಗಿಂತಲೂ ಹೆಚ್ಚು ಆಮೀರ್ ಖಾನ್ ವೈಯುಕ್ತಿಕ ಜೀವನದ ಸುದ್ದಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ, ಸದ್ಯಕ್ಕೆ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎನ್ನಲಾಗಿದೆ. ಆದ್ದರಿಂದ ಅವರು ತಮ್ಮ ಮೂರನೆಯ ಮದುವೆಯ ಸುದ್ದಿಯನ್ನು ಸ್ವಲ್ಪ ಮುಚ್ಚಿಟ್ಟಿದ್ದಾರೆ ಎನ್ನಲಾಗಿದೆ. 

ಅಷ್ಟಕ್ಕೂ ತಮಗೆ ಮೂರನೆಯ ವಧುವಾಗಿ ಬರುವವಳು ಯಾರೆಂಬುದನ್ನು ಆಮೀರ್‌ ಖಾನ್‌ ಈವರೆಗೆ ಎಲ್ಲೂ ಬಾಯಿಬಿಟ್ಟಿಲ್ಲ. ಆದರೆ ಎರಡನೆಯ ಪತ್ನಿಗೆ ವಿಚ್ಛೇದನ ಕೊಟ್ಟ ಸಮಯದಲ್ಲಿ ಹಾಗೂ ಆ ಬಳಿಕದ ದಿನಗಳಲ್ಲಿ ಆಮೀರ್‌ ಹೆಚ್ಚಾಗಿ ನಟಿ ಫಾತಿಮಾ ಸಮಾ ಶೇಖ್‌ ಜತೆ ಹೆಚ್ಚಾಗಿ ಒಡನಾಟ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಆದ್ದರಿಂದ ಆಕೆಯನ್ನೇ ಆಮೀರ್‌ ಖಾನ್ ವಿವಾಹವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 

ಮೊದಲ ಎರಡೂ ಪತ್ನಿಯರು ಹಿಂದೂ ಸಮುದಾಯದವರಾಗಿದ್ದರೆ, ಈಗ ಆಮೀರ್‌ ಖಾನ್ ಯಾರನ್ನು ಮದುವೆಯಾಗಲಿದ್ದಾರೆ ಎಂದು ಕಾದುನೋಡಬೇಕಿದೆ.‌‌‌ ಆಮೀರ್ ಖಾನ್ ಗೆ 56 ವರ್ಷವಾದರೆ, ಫಾತೀಮಾಗೆ 29 ವರ್ಷ ವಯಸ್ಸು! ಆಮೀರ್ ಖಾನ್‌ ಅವರ ಮೊದಲ ಪುತ್ರಿ ಇರಾನ್‌ ಖಾನ್‌ಗೆ 24 ವರ್ಷ, ಮಗ ಜುಬೇದ್‌ ಖಾನ್‌ಗೆ 23 ವರ್ಷ. ಇದೀಗ ಆಮೀರ್ ಖಾನ್ ತಮ್ಮ ಪುತ್ರಿಯ ವಯಸ್ಸಿನವಳನ್ನು ಮದುವೆಯಾಗಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.