
ಒಡಿಶಾ: ಮದುವೆಯ ಅಬ್ಬರದ ಡಿಜೆ ಸೌಂಡ್ ತಡೆಯಲಾಗದೆ ಕೋಳಿ ಫಾರ್ಮ್ 63 ಕೋಳಿಗಳು ಹೃದಯಾಘಾತದಿಂದ ಸಾವು
Wednesday, November 24, 2021
ನವದೆಹಲಿ: ಮದುವೆಯ ಸಂದರ್ಭದಲ್ಲಿನ ಅಬ್ಬರದ ಡಿಜೆ ಶಬ್ದದ ಪರಿಣಾಮ ತನ್ನ ಫಾರ್ಮ್ ನಲ್ಲಿನ 63 ಕೋಳಿಗಳು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಒಡಿಶಾದ ಬಾಲಾಸೋರ್ ನಲ್ಲಿನ ಯುವಕ ಪೊಲೀಸ್ ದೂರು ದಾಖಲಿಸಿದ್ದಾರೆ.
ಒಡಿಶಾದ ಬಾಲಾಸೋರ್ ನ ಕಂದಗರಡಿ ಗ್ರಾಮದ ನಿವಾಸಿ, ಕೋಳಿ ಫಾರಂ ಮಾಲಕ ರಂಜಿತ್ ಪರಿದಾ ಎಂಬವರು ನೀಲಗಿರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ತಮ್ಮ ನೆರೆಮನೆಯರಾದ ರಾಮಚಂದ್ರ ಪರಿದಾ ಅವರ ಮದುವೆಯ ಮೆರವಣಿಗೆಯಲ್ಲಿ ಅಬ್ಬರದಿಂದ ಡಿಜೆ ಸೌಂಡ್ ಬಳಸಲಾಗಿತ್ತು. ಶನಿವಾರ ಬೆಳಗ್ಗೆ 11.30ರ ಹೊತ್ತಿಗೆ ಡಿಜೆ ಬ್ಯಾಂಡ್ ಸೌಂಡ್ ನೊಂದಿಗೆ ಮದುವೆ ಮೆರವಣಿಗೆ ತನ್ನ ಕೋಳಿ ಫಾರ್ಮ್ ಸಮೀಪದಿಂದಲೇ ಹಾದು ಹೋಗಿತ್ತು. ಡಿಜೆ ಬ್ಯಾಂಡ್ ನಮ್ಮ ಕೋಳಿ ಫಾರ್ಮ್ ಬಳಿ ಬಂದಾಗ, ಕೋಳಿಗಳು ಎಗರಿ ಹಾರಲು ಆರಂಭಿಸಿವೆ.
ಈ ಸಂದರ್ಭ ತಾವು ಡಿಜೆ ಸೌಂಡ್ಸ್ ಕಡಿಮೆ ಮಾಡುವಂತೆ ಮನವಿ ಮಾಡಿಕೊಂಡರೂ ಅವರು ಕೇಳಲಿಲ್ಲ. ಡಿಜೆ ಶಬ್ದದಿಂದ ಕೋಳಿಗಳು ಎಗರಿ ಎಗರಿ ಹಾರಲಾರಂಭಿಸಿದೆ. ಈ ಸಂದರ್ಭ ಹೃದಯಾಘಾತದಿಂದ 63 ಕೋಳಿಗಳು ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ. ಕೋಳಿಗಳನ್ನು ಪರೀಕ್ಷಿಸಿದ ಪಶುವೈದ್ಯಾಧಿಕಾರಿ ಕೂಡಾ ಭಾರೀ ಶಬ್ದದ ಪರಿಣಾಮ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ರಂಜಿತ್ ಇಂಜಿನಿಯರಿಂಗ್ ಪದವೀಧರಾಗಿದ್ದು, ಯಾವುದೇ ಉದ್ಯೋಗ ದೊರಕದ ಪರಿಣಾಮ 2019ರಲ್ಲಿ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ 2 ಲಕ್ಷ ರೂ. ಸಾಲ ಪಡೆದು ಕೋಳಿ ಫಾರ್ಮ್ ಆರಂಭಿಸಿರುವುದಾಗಿ ತಿಳಿದು ಬಂದಿದೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಎರಡೂ ಕಡೆಯವರನ್ನು ಕರೆಸಿ ರಾಜಿ ಸಂಧಾನ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.